ಬೆಳಗಾವಿ: ಬೆಳಗಾವಿಯ ಬಾನಂಗಳದಲ್ಲಿ ಶನಿವಾರ ಬಾನಾಡಿಗಳೇ ಬೆರಗಾಗುವಂತೆ ಗಾಳಿಪಟಗಳು ಹಾರಾಡಿದವು.
ಹತ್ತನೆಯ ವರ್ಷಕ್ಕೆ ಕಾಲಿರಿಸಿದ ಗಾಳಿಪಟ ಉತ್ಸವ ರಸಿಕರ ಮನ ರಂಜಿಸಿತು. ಇಡೀ ಮಾಲಿನಿ ಮೈದಾನದಲ್ಲಿ ಪತಂಗಗಳು ಪಟಪಟಿಸಿದವು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ್ ಪರಿವಾರ ನಗರದ ಬಿ.ಎಸ್. ಯಡಿಯೂರಪ್ಪ ಮಾರ್ಗದ ಪಕ್ಕದಲ್ಲಿರುವ ಮಾಲಿನಿ ನಗರದಲ್ಲಿ ಶನಿವಾರದಿಂದ ಹಮ್ಮಿಕೊಂಡಿರುವ 10ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿತು.
ನೀಲಿ ಆಕಾಶದ ಮೇಲೆತ್ತರದಲ್ಲಿ ಆಕಳು, ಹಸು, ಹುಲಿ, ದೇವ ದೇವತೆಗಳು, ಆನೆ, ಪಕ್ಷಿಗಳು, ಹಾವು, ಹೋರಾಟಗಾರರು ಮೈವೆತ್ತ ಗಾಳಿಪಟಗಳು ಹಾರಾಡಿ ಜನರ ಮನರಂಜಿಸಿದವು. ಛತ್ರಪತಿ ಶಿವಾಜಿ ಮಹಾರಾಜರ ಸಂದೇಶಗಳುಳ್ಳ ಪಟಗಳು, ಪೌರತ್ವ ತಿದ್ದುಪಡಿ ಕಾಯ್ದೆ, ಕಾಶ್ಮೀರ 370 ಮತ್ತು 35ಎ, ರಾಷ್ಟ್ರೀಯ ನಾಗರಿಕರ ನೋಂದಣಿ ಬೆಂಬಲಿಸುವ, ಸಾಂಪ್ರದಾಯಿಕ ವಿಮಾನಗಳ ಆಕಾರದ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಾಡಿಸಲಾಯಿತು.
ದೈತ್ಯಾಕಾರದ ಆನೆ, ಹುಲಿ, ಹಾವು ಗಾಳಿಪಟದ ರೂಪದಲ್ಲಿ ಹಾರಾಡಿ ಮಕ್ಕಳನ್ನು ರಂಜಿಸಿದವು. ಗಾಳಿಯಲ್ಲಿ ತೇಲುವ ಗಾಳಿಪಟಗಳನ್ನು ವೀಕ್ಷಕರು ತಮ್ಮ ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿ ಖುಷಿ ಪಟ್ಟರು. ದೇಶ-ವಿದೇಶಗಳಿಂದ ಆಗಮಿಸಿದ್ದ ಅನೇಕ ಗಾಳಿಪಟ ಸ್ಪರ್ಧಾಳುಗಳು ತಮ್ಮ ಬತ್ತಳಿಕೆಯಿಂದ ಒಂದೊಂದು ಪಟಗಳನ್ನು ತೆಗೆದು ಹಾರಿಬಿಟ್ಟರು.ಜನರು ಕೂಡ ಅಷ್ಟೇ ಕುತೂಹಲದಿಂದ ವೀಕ್ಷಿಸಿದರು. ಬೃಹದಾಕಾರದ ಪಟಗಳು ಜನರ ಆಕರ್ಷಕ ಕೇಂದ್ರಬಿಂದುವಾಗಿದ್ದವು.
ಬಹುವರ್ಣ, ವೈವಿಧ್ಯಮಯ ಆಕಾರದ ಗಾಳಿಪಟಗಳು ಸ್ವತ್ಛಂದವಾಗಿ ಹಾರಾಡಿದವು. ಬಣ್ಣಬಣ್ಣದ ಹಕ್ಕಿಗಳು ಸಾಲಾಗಿ ಹೋಗುವಂತೆ ಕಂಡು ಬರುವ ದೃಶ್ಯಾವಳಿಯಂತೂ ಸೊಗಸಾಗಿತ್ತು.