ಕೆ.ಆರ್.ನಗರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಳ್ಳಲು ಪೋಷಕರು ಮತ್ತು ಶಿಕ್ಷಕರು ಮನವರಿಕೆ ಮಾಡಿಕೊಡಬೇಕು ಎಂದು ಚುಂಚನಕಟ್ಟೆ ಶಾಖಾ ಮಠದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಚೌಕಹಳ್ಳಿ ಗ್ರಾಮದ ಬಳಿ ಇರುವ ಆದಿಚುಂಚನಗಿರಿ ಬಾಲಜಗತ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೋಸ್ಕರ ಆಯೋಜಿಸಿದ್ದ ಗಾಳಿಪಟ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಮನೋರಂಜನೆ ನೀಡುವಂತಹ ಮತ್ತು ಧಾರ್ಮಿಕ ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರಲ್ಲಿ ಅಧ್ಯಾತ್ಮಿಕ ಚಿಂತನೆ ಬೆಳೆಯಲು ಸಾಧ್ಯವಾಗುತ್ತದೆ. ಆದಕಾರಣ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಪಡೆದು ಶಾಲೆಗೆ ಮತ್ತು ಪೋಷಕರಿಗೆ ಉತ್ತಮರಾಗದೆ, ಪ್ರಸ್ತುತ ಸಮಾಜದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಆದಿಚುಂಚನಗಿರಿ ಶಾಲಾ ಕಾಲೇಜುಗಳನ್ನು ತೆರೆದು ವಿದ್ಯಾದಾನದಂತಹ ಮಹತ್ತರವಾದಂತಹ ಕೆಲಸ ಮಾಡುತ್ತಿರುವ ಪರಿಣಾಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುನೀತ, ಶಿಕ್ಷಕರಾದ ಮಹದೇವ್, ಪುಟ್ಟೇಗೌಡ, ಜಲೇಂದ್ರರಾವ್, ಕೆ.ಜಿ.ಮಹದೇವ್, ಅಲಮೇಲು, ಆಶಾ, ರಾಜೇಶ್ವರಿ, ಶ್ವೇತಾ, ಅರ್ಚನ, ಪಲ್ಲವಿ, ನಂದಿನಿ, ಕಲ್ಪನ, ಅನುಪಮ, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.