Advertisement
ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಟೀಂ ಮಂಗಳೂರು ನೇತೃತ್ವದಲ್ಲಿ ಕರಾವಳಿ ಉತ್ಸವದ ಭಾಗವಾಗಿ ಗಾಳಿಪಟ ಉತ್ಸವ ನಡೆಯುತ್ತಿತ್ತು. ಆದರೆ, ರಾಜ್ಯ ಸರಕಾರದಿಂದ ಸಮರ್ಪಕವಾಗಿ ಅನುದಾನ ಬಾರದ ಕಾರಣ ಈ ಬಾರಿ ಆಯೋಜನೆಗೊಳ್ಳುವುದು ಅನುಮಾನ ಎನ್ನಲಾಗಿದೆ. ಗಾಳಿಪಟ ಉತ್ಸವಕ್ಕೆ ಸಾಮಾನ್ಯವಾಗಿ ಏಳರಿಂದ ಎಂಟು ದೇಶಗಳ ಪ್ರತಿನಿಧಿಗಳು ಆಗಮಿಸುತ್ತಾರೆ. ಸುಮಾರು 20ರಿಂದ 25 ಲಕ್ಷ ರೂ. ಖರ್ಚು ತಗಲುತ್ತದೆ. ಅಷ್ಟೊಂದು ಹಣ ಹೊಂದಿಸಲು ರಾಜ್ಯ ಸರಕಾರ ಆಸಕ್ತಿ ತೋರುತ್ತಿಲ್ಲ. ಅನುದಾನ ಹೊಂದಿಸುವ ನಿಟ್ಟಿನಲ್ಲಿ ಯಾವುದೇ ಸಂಘ-ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಪರಿಣಾಮ, ಉತ್ಸವ ರದ್ದುಗೊಳಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ.
ಗಾಳಿಪಟ ಉತ್ಸವ ಕೊನೆಯ ಬಾರಿ 2019ರಲ್ಲಿ ಪಣಂಬೂರು ಕಡಲ ತೀರದಲ್ಲಿ ನಡೆದಿತ್ತು. ಉತ್ಸವಕ್ಕೆ ಬೆಲ್ಜಿಯಂ, ನೆದರ್ಲೆಂಡ್, ಫ್ರಾನ್ಸ್, ಕಾಂಬೋಡಿಯ, ಮಲೇಷ್ಯಾ ಸೇರಿ 8 ದೇಶಗಳ ಸುಮಾರು 16 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಉತ್ಸವಕ್ಕೆ ಪ್ರತ್ಯೇಕ ಅನುದಾನ ನೀಡುವುದಾಗಿ ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದಾಗ ಸಿ.ಪಿ. ಯೋಗೀಶ್ವರ್ ಅವರು ಹೇಳಿದ್ದರು. ಆದರೆ ಈವರೆಗೆ ಯಾವುದೇ ಅನುದಾನ ಸಿಕ್ಕಿಲ್ಲ. ಬದಲಾಗಿ 2.5 ಲಕ್ಷ ರೂ. ನೀಡಲು ರಾಜ್ಯ ಸರಕಾರ ಬಾಕಿ ಇದೆ. ಜನವರಿ ತಿಂಗಳಲ್ಲಿ ಉತ್ಸವ
2019 ಸೇರಿದಂತೆ ಈ ಹಿಂದೆ ಮಂಗಳೂರಿನಲ್ಲಿ ಜನವರಿ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿತ್ತು. ಗುಜರಾತ್‌ನಲ್ಲಿ ಆಯೋಜನೆಗೊಳ್ಳುವ ಉತ್ಸವಕ್ಕೆ ಆಗಮಿಸುವ ವಿದೇಶಿ ಪ್ರತಿನಿಧಿಗಳಲ್ಲಿ ಹೆಚ್ಚಿನ ಮಂದಿ ಮಂಗಳೂರಿಗೂ ಆಗಮಿಸುತ್ತಿದ್ದರು. ಆದರೆ, ಈ ವರ್ಷದ ಉತ್ಸವಕ್ಕೆ ಮಂಗಳೂರಿನಲ್ಲಿ ಇನ್ನೂ ಯಾವುದೇ ತಯಾರಿ ಆರಂಭಗೊಂಡಿಲ್ಲ. ವಿದೇಶಿಗರನ್ನು ಆಹ್ವಾನಿಸಿ, ಆ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳಾದರೂ ಬೇಕು. ಇನ್ನೂ ಆರಂಭಿಕ ಹಂತವೇ ನಡೆಯದ ಕಾರಣ ಈ ಬಾರಿಯ ಉತ್ಸವ ನಡೆಯುವುದಿಲ್ಲ ಎನ್ನುತ್ತಾರೆ ಟೀಂ ಮಂಗಳೂರಿನ ಆರ್ಟಿಸ್ಟ್ ದಿನೇಶ್ ಹೊಳ್ಳ.
Related Articles
ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಮಂಗಳೂರು ಕೇಂದ್ರೀಕೃತವಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತದೆ. 2019ರಲ್ಲಿ ಕೊನೆಯದಾಗಿ ಉತ್ಸವ ನಡೆದಿತ್ತು. ಬಳಿಕ ನಿಂತಿದ್ದು, ಇನ್ನೂ ಆರಂಭಗೊಂಡಿಲ್ಲ. ಉತ್ಸವ ಆಯೋಜನೆಗೆ ಸಂಬಂಧಪಟ್ಟ ಇಲಾಖೆಯೂ ಉತ್ಸಾಹ ತೋರುತ್ತಿಲ್ಲ. ಆಯೋಜನೆ ಮತ್ತು ಅನುದಾನ ಹೊಂದಿಸುವುದೂ ಸವಾಲಾಗಿದೆ.
– ಸರ್ವೇಶ್ ರಾವ್, ಟೀಂ ಮಂಗಳೂರು ಸ್ಥಾಪಕ
Advertisement
– ನವೀನ್ ಭಟ್, ಇಳಂತಿಲ