Advertisement

ಅಡುಗೆಮನೆಯ ತೂಕವರ್ಧಕಗಳು

06:00 AM Dec 14, 2018 | |

ಹೈಪರ್‌ ಥೈರಾಯಿಡ್‌ ಸಮಸ್ಯೆ, ಜೀರ್ಣಾಂಗ ವ್ಯೂಹದ ಕಾಯಿಲೆ, ಅಪಚನ, ಅಗ್ನಿಮಾಂದ್ಯ, ಕೆಲವು ದೀರ್ಘ‌ಕಾಲೀನ ರೋಗಗಳಲ್ಲಿ ಖನ್ನತೆ, ಒತ್ತಡ ಹಾಗೂ ಕೆಲವು ಔಷಧಗಳ ಸೇವನೆಯಿಂದ ತೂಕ ಕಡಿಮೆಯಾಗುತ್ತದೆ. ಕಡಿಮೆ ತೂಕವು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರವಲ್ಲ. ಅಪೌಷ್ಟಿಕತೆ, ರಕ್ತಹೀನತೆ, ಮುಟ್ಟಿನ ವ್ಯತ್ಯಯ, ಮೂಳೆ ಮತ್ತು ಮಾಂಸಗಳ ಬಲಹೀನತೆ ಮುಂತಾದವುಗಳು ಕಡಿಮೆ ತೂಕದ ತೊಂದರೆಯಿಂದ ಉಂಟಾಗುತ್ತದೆ.

Advertisement

ತೂಕ ವರ್ಧನೆಗೆ ಉತ್ತಮ ಪೋಷಕಾಂಶಗಳುಳ್ಳ, ಆರೋಗ್ಯಕರ ಆಹಾರ ಸೇವನೆ ಅಡುಗೆ ಮನೆಯಲ್ಲಿಯೇ ತಯಾರಿಸಬಹುದು!

ಹಾಲು, ಓಟ್ಸ್‌  , ಬಾಳೆಹಣ್ಣಿನ ಪೇಯ
ಬೇಕಾಗುವ ಸಾಮಗ್ರಿ: 1 ಕಪ್‌ ಕೆನೆಸಹಿತ ಹಾಲು, 3 ಬಾಳೆಹಣ್ಣಿನ ತುಂಡುಗಳು, 1 ಕಪ್‌ ಓಟ್ಸ್‌ , ಬೆಲ್ಲದ ಪುಡಿ 2 ಚಮಚ.

ವಿಧಾನ: ಮೊದಲು ಓಟ್ಸ್‌ ನ್ನು ಮಿಕ್ಸರ್‌ನಲ್ಲಿ ತಿರುವಿ ಪುಡಿ ಮಾಡಬೇಕು. ತದನಂತರ ಬಾಳೆಹಣ್ಣಿನ ತುಂಡುಗಳು ಮತ್ತು ಸ್ವಲ್ಪ ಹಾಲು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇವೆರಡನ್ನೂ 1 ಕಪ್‌ ಕೆನೆಸಹಿತ ಹಾಲಿಗೆ ಬೆರೆಸಿ, ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ರುಚಿಕರವಾದ ಪೌಷ್ಟಿಕವಾದ ಈ ಪೇಯ ದಿನಕ್ಕೆ 1-2 ಬಾರಿ ಸೇವಿಸಿದರೆ ತೂಕವರ್ಧನೆ, ದೇಹಪುಷ್ಟಿ ಹಾಗೂ ಬಲವರ್ಧನೆ ಉಂಟಾಗುತ್ತದೆ. ಇದಕ್ಕೆ 2 ಚಮಚ ತಾಜಾ ಕೆನೆ ಬೆರೆಸಿ ಸೇವಿಸಿದರೂ ಹಿತಕರ. ಬೆಳೆಯುವ ಮಕ್ಕಳಿಗೂ ಪುಷ್ಟಿಕರ ಪೇಯವಿದು.

ಬೆಣ್ಣೆ ಹಣ್ಣು-ಬಾದಾಮಿ ಹಾಲಿನ ಸೂದಿ
ಬೇಕಾಗುವ ಸಾಮಗ್ರಿ:
1/2 ಬೆಣ್ಣೆಹಣ್ಣು , 1 ಕಪ್‌ ಬಾದಾಮಿ ಹಾಲು, 1/2 ಕಪ್‌ ಸೋಯಾ ಹಾಲು, 3 ಚಮಚ ಕೋಕೊ ಪುಡಿ, 3 ಚಿಟಿಕೆ ದಾಲ್ಚಿನಿ ಪುಡಿ, ಜೇನು 2 ಚಮಚ.

Advertisement

ವಿಧಾನ: ಎಲ್ಲಾ ಸಾಮಗ್ರಿಗಳನ್ನು ಮಿಕ್ಸರ್‌ನಲ್ಲಿ ತೆಗೆದುಕೊಂಡು ಚೆನ್ನಾಗಿ ತಿರುವಬೇಕು. ರುಚಿಕರವಾದ, ತೂಕವರ್ಧಕ ಸೂ¾ದಿ ರೆಡಿ.

ಡ್ರೈಫ್ರೂಟ್ಸ್‌ ಲಡ್ಡು
ಬೇಕಾಗುವ ಸಾಮಗ್ರಿ: 1/4 ಕಪ್‌ ಒಣದ್ರಾಕ್ಷೆ , 1/4 ಕಪ್‌ ಒಣ ಅಂಜೂರ, 1/4 ಕಪ್‌ ಖರ್ಜೂರ, 4 ಚಮಚ ಗೋಡಂಬಿ, 1/4 ಕಪ್‌ ಬಾದಾಮಿ, 1/4 ಕಪ್‌ ನೆಲಗಡಲೆ, 15 ಚಮಚ ತುಪ್ಪ.

ವಿಧಾನ: ಬೀಜ ತೆಗೆದ ಖರ್ಜೂರದ ತುಂಡು, ಒಣ ಅಂಜೂರದ ತುಂಡು ಹಾಗೂ ಒಣದ್ರಾಕ್ಷೆಯನ್ನು ಬ್ಲೆಂಡರ್‌ನಲ್ಲಿ ತಿರುವಿ ತರಿತರಿ ಪೇಸ್ಟ್‌ ತಯಾರಿಸಬೇಕು. ಗೋಡಂಬಿ, ಬಾದಾಮಿ, ನೆಲಗಡಲೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು.
ದುಂಡಗಿನ ಕಾವಲಿಯಲ್ಲಿ ಸ್ವಲ್ಪ ತುಪ್ಪ ತೆಗೆದುಕೊಂಡು ಬಾದಾಮಿ, ಗೋಡಂಬಿ ಹಾಗೂ ನೆಲಗಡಲೆಯ ತುಂಡುಗಳನ್ನು ಹೊಂಬಣ್ಣ ಬರುವವರೆಗೆ ಹುರಿಯಬೇಕು. ತದನಂತರ ಇದಕ್ಕೆ ಒಣದ್ರಾಕ್ಷೆ , ಒಣ ಅಂಜೂರ ಹಾಗೂ ಖರ್ಜೂರದ ಅರೆದ ಪೇಸ್ಟ್‌ ಸೇರಿಸಿ ಚೆನ್ನಾಗಿ ಕೈಬಿಡದೆ ಮಗುಚಬೇಕು. ಕೊನೆಯಲ್ಲಿ ಉಳಿದ ತುಪ್ಪ ಬೆರೆಸಿ ಮಿಶ್ರ ಮಾಡಬೇಕು. ಬೆಚ್ಚಗಿರುವಾಗ ಲಾಡು ಕಟ್ಟಬೇಕು. ಇದಕ್ಕೆ ಯಾವುದೇ ಸಕ್ಕರೆ ಅಥವಾ ಬೆಲ್ಲದ ಸಿಹಿ ಬೇಕಾಗುವುದಿಲ್ಲ. ರುಚಿಕರ ತೂಕವರ್ಧಕ ಈ ಲಡ್ಡು ರಕ್ತವರ್ಧಕ, ಮಕ್ಕಳಲ್ಲಿ ಬಾಣಂತಿಯರಲ್ಲಿ ಹಿತಕರ.

ಉದ್ದಿನಬೇಳೆಯ ಪೇಯ
ಬೇಕಾಗುವ ಸಾಮಗ್ರಿ:
1/4 ಕಪ್‌ ಉದ್ದಿನಬೇಳೆ, 4 ಚಮಚ ತುಪ್ಪ , 2 ಕಪ್‌ ಕನೆಭರಿತ ಹಾಲು, 2 ಚಮಚ ಜೇನುತುಪ್ಪ, 2 ಚಮಚ ಬೆಲ್ಲ.

ವಿಧಾನ: ಸಣ್ಣ ಕಾವಲಿಯಲ್ಲಿ ಸ್ವಲ್ಪ ತುಪ್ಪದಲ್ಲಿ ಉದ್ದಿನಬೇಳೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿಯಬೇಕು. ಆರಿದ ಬಳಿಕ ಮಿಕ್ಸರ್‌ನಲ್ಲಿ ಹುಡಿ ಮಾಡಬೇಕು. ಇದನ್ನು  2 ಕಪ್‌ ಹಾಲಿಗೆ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ಕೊನೆಯಲ್ಲಿ ತುಪ್ಪ , ಬೆಲ್ಲ ಬೆರೆಸಿ ಕರಗಿಸಿ ಆರಲು ಬಿಡಬೇಕು. ಆರಿದ ಬಳಿಕ ಜೇನು ಬೆರೆಸಿ 1 ಕಪ್‌ನಂತೆ ದಿನಕ್ಕೆ 2 ಬಾರಿ ಸೇವಿಸಿದರೆ, ತೂಕ ಹೆಚ್ಚಳವಾಗುತ್ತದೆ. ಇದು ಬಲ್ಯ , ಮಾಂಸಖಂಡಗಳಿಗೆ, ಮೂಳೆ ಹಾಗೂ ಸಂಧಿಗಳಿಗೆ ಬಲದಾಯಕ, ಆರೋಗ್ಯಕರ ಪೇಯವಾಗಿದೆ.

ಕಾಯಿಹಾಲಿನ ಪಾನೀಯ
ಬೇಕಾಗುವ ಸಾಮಗ್ರಿ: 1 ಕಪ್‌ ದಪ್ಪ ಕಾಯಿಹಾಲು, 1/2 ಕಪ್‌ ಅನಾನಾಸು ತುಂಡುಗಳು, 1/2 ಕಪ್‌ ಕತ್ತರಿಸಿದ ಬಾಳೆಹಣ್ಣು, 4 ಚಮಚ ಹಸಿ ಕೊಬ್ಬರಿ ಎಣ್ಣೆ , 1/2 ಚಮಚ ಅರಸಿನಹುಡಿ, 4 ಚಿಟಿಕೆ ದಾಲಿcàನಿ ಪುಡಿ, 1/2 ಚಮಚ ಅಗಸೆ ಬೀಜದ ಹುಡಿ, 4 ಚಮಚ ಹುರಿದು ಹುಡಿಮಾಡಿದ ಗೋಡಂಬಿ ಪುಡಿ.

ವಿಧಾನ: ಮೊದಲು ಸ್ವಲ್ಪ ಕಾಯಿಹಾಲಿನ ಜೊತೆಗೆ ಅನಾನಾಸು ತುಂಡು ಹಾಗೂ ಬಾಳೆಹಣ್ಣಿನ ತುಂಡುಗಳನ್ನು ಮಿಕ್ಸರ್‌ನಲ್ಲಿ ತಿರುವಬೇಕು. ತದನಂತರ ಈ ಪೇಸ್ಟನ್ನು ಕಾಯಿಹಾಲಿಗೆ ಬೆರೆಸಿ ಉಳಿದ ಎಲ್ಲಾ ಸಾಮಗ್ರಿಗಳನ್ನು ಬೆರೆಸಬೇಕು. ರುಚಿಕರ ಕಾಯಿಹಾಲಿನ ಈ ಪಾನೀಯ ದೇಹಕ್ಕೆ ಅವಶ್ಯವಿರುವ ಅಧಿಕ ಕ್ಯಾಲರಿಗಳನ್ನು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ದೇಹಕ್ಕೆ, ಕಣ್ಣಿಗೆ ತಂಪು. ಕೂದಲಿಗೆ, ಚರ್ಮಕ್ಕೂ ಉತ್ತಮ ಟಾನಿಕ್‌.

ಆಲೂ ಬೇಕ್‌
ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಚೆನ್ನಾಗಿ ತೊಳೆದು ಮೈಕ್ರೋವೇವ್‌ನಲ್ಲಿ ಬೇಕ್‌ ಮಾಡಬೇಕು. ಅಥವಾ ಇಡ್ಲಿ ಪಾತ್ರೆಯಲ್ಲಿಟ್ಟು ಉಗಿಯಲ್ಲಿ ಬೇಯಿಸಬೇಕು. ಆರಿದ ಬಳಿಕ ದುಂಡಗಿನ ಬಿಲ್ಲೆಗಳಾಗಿ ಕತ್ತರಿಸಿ ಬೆಣ್ಣೆ ಅಥವಾ ತುಪ್ಪ ಲೇಪಿಸಿ, ಮೆಣಸಿನ ಹುಡಿ, ಇಂಗಿನ ಪುಡಿ, ಉಪ್ಪಿನ ಹುಡಿ ಉದುರಿಸಿ, ಬೇಸ್‌ನ ತುರಿಯನ್ನು ಬೆರೆಸಿ ಸೇವಿಸಿದರೆ ಶಕ್ತಿದಾಯಕ ತೂಕವರ್ಧಕ ಸ್ನ್ಯಾಕ್‌ ಆಗಿದೆ. ಸಂಜೆಯ ಸಮಯ ಸೇವನೆಗೆ ಹಿತಕರ. ಸಿಪ್ಪೆ ಸಹಿತ ಸೇವಿಸಿದಾಗ ಪೊಟ್ಯಾಶಿಯಂನಂತಹ ಖನಿಜ ಲವಣಗಳು ನಷ್ಟವಾಗದೆ ದೊರೆಯುತ್ತವೆ. ಜೊತೆಗೆ ಈ ರೀತಿ ಸೇವಿಸಿದಾಗ ವಾಯುಬಾಧೆ ಉಂಟಾಗುವುದಿಲ್ಲ.

ಸಿಹಿ ಮೊಸರನ್ನ
ಅನ್ನವನ್ನು ದಪ್ಪ ಸಿಹಿ ಮೊಸರಲ್ಲಿ 1 ಗಂಟೆ ನೆನೆಸಿಡಬೇಕು. ತದನಂತರ ಕತ್ತರಿಸಿದ ಹಸಿದ್ರಾಕ್ಷೆ , ದಾಳಿಂಬೆ, ಅನಾನಾಸು ತುಣುಕು, ತುರಿದ ಕ್ಯಾರೆಟ್‌, ಹುರಿದ ಗೋಡಂಬಿ, ಒಣದ್ರಾಕ್ಷೆ , ಬಾದಾಮಿಯ ತುಂಡು, ಹುರಿದ ನೆಲಗಡಲೆ ಬೀಜ, ಕೊಬ್ಬರಿ ತುಂಡುಗಳನ್ನು ಸೇರಿಸಬೇಕು. ತುಪ್ಪದಲ್ಲಿ ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವಿನೊಂದಿಗೆ ಒಗ್ಗರಣೆ ಕೊಟ್ಟು , ಕತ್ತರಿಸಿದ ಕೊತ್ತಂಬರಿ ಸೊಪ್ಪು , ಸ್ವಲ್ಪ ಉಪ್ಪು ಬೆರೆಸಿ ಸೇವಿಸಿದರೆ ಉತ್ತಮ ತೂಕವರ್ಧಕ ಆಹಾರವಿದು!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next