Advertisement
೨೦೧೭ ರಲ್ಲಿ ಅಂಜನಾದ್ರಿ ಪೂಜೆ ಮತ್ತು ಮಾಲೀಕತ್ವದ ವಿಷಯದಲ್ಲಿ ಆನೆಗೊಂದಿ ರಾಜವಂಶದ ನೇತೃತ್ವದ ಟ್ರಸ್ಟ್ ಹಾಗೂ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ವಾದ-ವಿವಾದ ಜರುಗಿ ಅಂಜನಾದ್ರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಶಾಂತಿ ವಾತಾವರಣದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಿಲ್ಲಾಡಳಿತ ವಶಕ್ಕೆ ಕಿಷ್ಕಿಂಧಾ ಅಂಜನಾದ್ರಿ ದೇಗುಲವನ್ನು ಪಡೆದು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ನಂತರ ರಾಜ್ಯ ಸರಕಾರ ಅಂಜನಾದ್ರಿ ದೇಗುಲವನ್ನು ಧಾರ್ಮಿಕ ಮತ್ತು ಮುಜರಾಯಿ ಇಲಾಖೆಗೆ ವಹಿಸಿ ಗೆಜೆಟ್ ನಲ್ಲಿ ಪ್ರಕಟಿಸಿತ್ತು. ಇದುವರೆಗೂ ಸುಮಾರು ೫ ಕೋಟಿಗೂ ಹೆಚ್ಚು ಆದಾಯ ಸರಕಾರಕ್ಕೆ ಬಂದಿದ್ದು ಕಿಷ್ಕಿಂಧಾ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ನೀಲ ನಕ್ಷೆ, ಯೋಜನೆ ರೂಪಿಸಿ 120 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
Related Articles
Advertisement
ಅಂಜನಾದ್ರಿ ದೇಗುಲದಲ್ಲಿ ಪೂಜೆಗೆ ವಿದ್ಯಾದಾಸ ಬಾಬಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಗರ್ಭಗುಡಿಯ ಮುಂದೆ ಖಾಸಗಿ ವ್ಯಕ್ತಿಯನ್ನು ವಿದ್ಯಾ ದಾಸ ಬಾಬಾ ಕುಳ್ಳಿರಿಸಿದ್ದು ಇದಕ್ಕೆ ಸಿಬ್ಬಂದಿ ವರ್ಗ ಆಕ್ಷೇಪಿಸಿದರೂ ನಿರ್ಲಕ್ಷ್ಯ ಮಾಡಲಾಗಿದೆ.ಈ ಕುರಿತು ಜಿಲ್ಲಾಧಿಕಾರಿ ಗಳ ಗಮನಕ್ಕೆ ತರಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ಗೆ ದೂರು ಸಹ ನೀಡಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.
ನೇಮಕದ ಅಧಿಕಾರವಿದೆ
ಅಂಜನಾದ್ರಿ ದೇಗುಲವನ್ನು ಕೆಲವರು ಷಡ್ಯಂತ್ರ ನಡೆಸಿ ಸರಕಾರದ ವಶಕ್ಕೆ ಹೋಗುವಂತೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.ಸದ್ಯ ತಮಗೆ ದೇಗುಲದಲ್ಲಿ ಪೂಜೆ ಧಾರ್ಮಿಕ ಕಾರ್ಯ ಮಾಡಲು ಕೋರ್ಟ್ ಅವಕಾಶ ನೀಡಿದೆ. ಪೂಜೆ ಕಾರ್ಯದಲ್ಲಿ ನೆರವಾಗಲು ಮತ್ತು ತೀರ್ಥಪ್ರಸಾದ ವಿತರಣೆ ಮಾಡಲು ನಾನು ಸಹಾಯಕನನ್ನು ನಿಯೋಜನೆ ಮಾಡಿದ್ದು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುತ್ತದೆ ಎಂದು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ತಿಳಿಸಿದ್ದಾರೆ.
~ ಕೆ.ನಿಂಗಜ್ಜ