Advertisement

ಆರನೇ ದಿನಕ್ಕೆ ಕಾಲಿಟ್ಟ ಕಿಸಾನಸಭಾ ಧರಣಿ

01:22 PM Dec 16, 2021 | Team Udayavani |

ಆಳಂದ: ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲಿಸುವ ಜತೆಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಕ್ರಮ ಕೈಗೊಳ್ಳಬೇಕು ಎಂದು ಅಖೀಲ ಭಾರತ ಕಿಸಾನಸಭಾ ತಾಲೂಕು ಮುಖಂಡರು ಒತ್ತಾಯಿಸಿದರು.

Advertisement

ತಾಪಂ ಕಚೇರಿ ಬಳಿಯ ಅಖೀಲ ಭಾರತ ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ನೇತೃತ್ವದಲ್ಲಿ ತಾಲೂಕು ಘಟಕವು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೈಗೊಂಡ ಐದನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಕಲಬುರಗಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ ಅವರಿಗೆ ಮನವಿ ಸಲ್ಲಿಸಿ, ಅವರು ಮಾತನಾಡಿದರು.

ಕಿಸಾನಸಭಾ ತಾಲೂಕು ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಮಾತನಾಡಿ, ಪಂಪ್‌ಸೆಟ್‌ ಹೊಂದಿರುವ ರೈತರಿಗೆ ನಿರಂತರ ವಿದ್ಯುತ್‌ ಸಂಪರ್ಕ ಒದಗಿಸಿ. ಸಾಧ್ಯ ವಾಗದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ. ಅದರ ಪ್ರತಿ ನಮಗೆ ಕೊಡಿ. ಮುಂದಿನ ದಿನದಲ್ಲಿ ಅವರಿಗೆ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ ಎಂದರು.

ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ ಮಾತನಾಡಿ, ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಇದರಿಂದ ಬೆಳೆ ಸರಿಯಾಗಿ ಬೆಳೆಯಲು ಆಗುತ್ತಿಲ್ಲ. ಈ ಕುರಿತು ಜೆಸ್ಕಾಂ ಅಧಿಕಾರಿಗಳು ಗಮನಿಸಬೇಕು ಎಂದು ಕೋರಿದರು.

ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ಕಾರ್ಯಾಧ್ಯಕ್ಷ ಶರಣ ಕುಲಕರ್ಣಿ ಇದ್ದರು. ಜಾವಳಿ ಗ್ರಾಮದ ರೈತ ಮೈನೋದ್ದೀನ ಜಾವಳಿ ಮಾತನಾಡಿ, ಅನೇಕ ವರ್ಷಗಳಿಂದ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುತ್ತಿಲ್ಲ. ವಿದ್ಯುತ್‌ ಕಂಬಗಳನ್ನು ಅಳವಡಿಸಿಲ್ಲ. ದೂರದಿಂದ ವಿದ್ಯುತ್‌ ಸಂಪರ್ಕ ಪಡೆಯಲು ಹೋಗಿ ಜಾವಳಗಿ, ಹಿತ್ತಲಶಿರೂರ, ಭೂಸನೂರದಲ್ಲಿ ಕೆಲವು ರೈತರು ಮೃತಪಟ್ಟಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ರೈತ ಸಂಘದ ವೈಜನಾಥ ತಡಕಲ್‌ ಖಜೂರಿ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ತಡಕಲ್‌, ಡಿಎಸ್‌ಎಸ್‌ ಮುಖಂಡ ಭೀಮಾಶಂಕರ ತಳಕೇರಿ, ಭೂಸನೂರ ಗ್ರಾಪಂ ಉಪಾಧ್ಯಕ್ಷ ದಸ್ತಗೀರ ಗೌರ, ಅಂಬಾರಾಯ ಬೀಳಗಿ, ಕಿಸಾನಸಭಾ ಫಕ್ರೋದ್ದೀನ್‌ ಗೋಳಾ, ವಿಶ್ವನಾಥ ಜಮಾದಾರ ಪಡಸಾವಳಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಮನವಿ ಸ್ವೀಕರಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ ಮಾತನಾಡಿ, ಸರ್ಕಾರದ ಮಟ್ಟದಲ್ಲಿರುವ ಬೇಡಿಕೆಗಳನ್ನು ಮೇಲಧಿಕಾರಿಗೆ ಕಳುಹಿಸಲಾಗುವುದು ಎಂದರು.

ಜೆಸ್ಕಾಂ ಆಳಂದ ಎಇಇ ಮಾಣಿಕರಾವ್‌ ಕುಲಕರ್ಣಿ ಮತ್ತು ಇನ್ನಿತರ ಶಾಖೆಯ ಇಂಜಿನಿಯರ್‌ಗಳು ಇದ್ದರು. ಉದ್ಯೋಗ ಖಾತ್ರಿ ಕಾಮಗಾರಿ ಆರಂಭ, ಸಮರ್ಪಕ ವಿದ್ಯುತ್‌ ಪೂರೈಕೆ ಸಮರ್ಪಕವಾಗಿ ನೀಡುವ ವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು. ಧರಣಿ ಈಗ ಆರನೇ ದಿನಕ್ಕೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next