Advertisement

ಕಿಸಾನ್‌ ಸಮ್ಮಾನ್‌ ಅನುಷ್ಠಾನ ಮಾರ್ಗಸೂಚಿ

01:00 AM Feb 25, 2019 | Harsha Rao |

ಮಣಿಪಾಲ: ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರ ಘೋಷಿಸಿರುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ ಕಿಸಾನ್‌) ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯೋಜನೆಯನ್ನು ಶೇ. 100 ಕೇಂದ್ರದ ಅನುದಾನದಲ್ಲಿ ಅನುಷ್ಠಾನಗೊಳಿಸಬೇಕಿದ್ದು, 2 ಹೆಕ್ಟೇರ್‌ ಅಥವಾ 5 ಎಕರೆಗಿಂತ ಕಡಿಮೆ ಕೃಷಿ ಹಿಡುವಳಿ ಹೊಂದಿರುವ ರೈತರು ವಾರ್ಷಿಕ 3 ಕಂತುಗಳಲ್ಲಿ 6 ಸಾವಿರ ರೂ. ಪಡೆಯಲು ಅರ್ಹರು.

Advertisement

ಜಂಟಿ ಒಡೆತನವಿದ್ದರೆ?
ಪ್ರಸ್ತುತ ಯೋಜನೆಯನ್ನು ಓರ್ವ ವ್ಯಕ್ತಿಯ ಒಡೆತನದ ಹಿಡುವಳಿಗೆ (ಭೂ ಮಾಲಕ ರೈತ ಕುಟುಂಬ) ಅನ್ವಯಿಸಲಾಗಿದೆ. ಜಂಟಿ ಒಡೆತನದ ಭೂಮಿಗೆ ನೆರವು ನೀಡುವ ಬಗ್ಗೆ ಸದ್ಯ ಮಾರ್ಗಸೂಚಿ ನೀಡಲಾಗಿಲ್ಲ. ಬೇರೆ ಬೇರೆ ಗ್ರಾಮಗಳಲ್ಲಿ ಕೃಷಿ ಭೂಮಿ ಇರುವ ವ್ಯಕ್ತಿ/ ರೈತ ಕುಟುಂಬದ ಒಟ್ಟು ಕೃಷಿ ಭೂಮಿಯ ಪರಿಗಣನೆಗೆ ಕೈಗೊಂಡ ಕ್ರಮದ ಮಾಹಿತಿಯೂ ಇಲ್ಲ.

ಪ್ರಕ್ರಿಯೆ ಹೇಗೆ ?
ಪ್ರಸ್ತುತ ಸರಕಾರದ ಬಳಿ ಇರುವ ಮಾಹಿತಿಯನ್ನು ಬಳಸಿಕೊಂಡು ಹಾಗೂ ಗಣಕೀಕೃತ ಭೂ ದಾಖಲೆಗಳ ನೆರವನ್ನು ಪಡೆದುಕೊಂಡು ಕೃಷಿ ಇಲಾಖೆಯಲ್ಲಿ ನೋಂದಾಯಿಸಿರುವ ರೈತರ ಪೈಕಿ ಯೋಜನೆಗೆ ಅರ್ಹರಾದವರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಗ್ರಾ.ಪಂ.ಗಳಲ್ಲಿ ಈ ಪಟ್ಟಿ ಪ್ರಕಟಿಸಲಾಗಿದೆ. ಗ್ರಾಮಕರಣಿಕರು ತಮ್ಮ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿ ಒಟ್ಟು ಅರ್ಹ ರೈತರ ಪಟ್ಟಿಯನ್ನು ಪ್ರಕಟಿಸುತ್ತಾರೆ. ಈ ಪಟ್ಟಿಯಲ್ಲಿರುವ ರೈತರ ಹೆಸರನ್ನು ಫಾರ್ಮರ್‌ ರಿಜಿಸ್ಟ್ರೇಶನ್‌ ಆ್ಯಂಡ್‌ ಯೂನಿಫೈಡ್‌ ಬೆನಿಫೀಶರಿ ಇನ್‌ಫಾರ್ಮೇಶನ್‌ ಸಿಸ್ಟಮ್‌ನಲ್ಲಿ ಅಳವಡಿಸಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ.

ಕನಿಷ್ಠ ಮಿತಿ ಇಲ್ಲ
2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಇರುವ ರೈತರು ಯೋಜನೆಗೆ ಅರ್ಹರಾಗಿದ್ದಾರೆ. ಆದರೆ ಕನಿಷ್ಠ ಎಷ್ಟು ಹಿಡುವಳಿ ಇರಬೇಕೆಂಬ ಬಗ್ಗೆ ಮಾರ್ಗಸೂಚಿ ಇಲ್ಲ. ಅತೀ ಸಣ್ಣ ರೈತರೂ ಒಳಪಡುವುದರಿಂದ ಗ್ರಾಮ ಕರಣಿಕರು ಪರಿಶೀಲಿಸಿ ರೈತರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಭೂಮಿಯಲ್ಲಿ ಮಾಡಿರುವ/ಮಾಡಿದ ಕೃಷಿಯ ಮಾಹಿತಿ ಯನ್ನೂ ಮಾರ್ಗಸೂಚಿ ಕಡ್ಡಾಯಗೊಳಿಸಿಲ್ಲ. 

ಸ್ವಯಂ ಘೋಷಣೆ ಕಡ್ಡಾಯ
ಸಂಭವನೀಯ ಅರ್ಹರ ಪಟ್ಟಿಯಲ್ಲಿರುವ ರೈತರು ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು. ಪಟ್ಟಿಯಲ್ಲಿ ಇದ್ದವರು ಅನುಬಂಧ “ಸಿ’ಯಲ್ಲಿ, ಹೊಸ ಸೇರ್ಪಡೆಯವರು ಅನುಬಂಧ “ಡಿ’ಯಲ್ಲಿ ಸ್ವಯಂ ಘೋಷಣೆ ಸಲ್ಲಿಸಬೇಕು. “ಡಿ’ ಘೋಷಣೆಯೊಂದಿಗೆ ರೈತರು ಆರ್‌ಟಿಸಿ, ಆಧಾರ್‌, ಪಾಸ್‌ಬುಕ್‌ ಮಾಹಿತಿ, ಫೋಟೊ ಸಲ್ಲಿಸಬೇಕಿರುತ್ತದೆ. ಸ್ವಯಂ ಘೊಷಣೆ ಸಲ್ಲಿಸಿದ ಬಳಿಕವಷ್ಟೇ ರೈತರ ಹೆಸರನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ. ತಾ| ಮಟ್ಟದ ಅಧಿಕಾರಿಗಳು ಪಟ್ಟಿಯ ಕ್ರೋಡೀಕರಣ ಮಾಡುತ್ತಾರೆ. ಅನುಮೋದಿತ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ನರವಿನ ಮೊತ್ತ ಜಮೆಯಾಗಲಿದೆ.

Advertisement

ಸ್ವಯಂ ಘೋಷಣೆ ಎಲ್ಲಿ?
ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅನುಬಂಧ ಸಿ, ಡಿಯ ಘೋಷಣೆಗಳನ್ನು ಭೌತಿಕ ಮತ್ತು ವಿದ್ಯುನ್ಮಾನ ರೀತಿಯಲ್ಲಿ ಮಾಡ ಬಹುದಾಗಿದೆ. ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಈ ಪ್ರಕ್ರಿಯೆ ಮಾಡಲಾಗುತ್ತಿದ್ದು, ಉಳಿದ ಕೇಂದ್ರಗಳಲ್ಲೂ ಶೀಘ್ರ ಜಾರಿಯಾದರೆ ರೈತರಿಗೆ ಅನುಕೂಲವಾಗಲಿದೆ. ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದಲ್ಲಿ ವಿದ್ಯುನ್ಮಾನ ಘೋಷಣೆ (ಇ ಸೈನ್‌)ಗೆ ಮಾತ್ರ ಅವಕಾಶವಿದ್ದು ಭೌತಿಕ ಘೋಷಣೆಗಳನ್ನು ಸ್ವೀಕರಿಸುವುದಿಲ್ಲ.

ಗ್ರಾಮ ಕರಣಿಕರಿಗೆ ಹೊಣೆ
ಅರ್ಹ ರೈತರನ್ನು ಗುರುತಿಸುವುದು ಹಾಗೂ ಅನರ್ಹರನ್ನು ಪಟ್ಟಿಯಿಂದ ಕೈಬಿಡುವ ಜವಾಬ್ದಾರಿ ಯನ್ನು ಗ್ರಾಮ ಕರಣಿಕರಿಗೆ ನೀಡಲಾಗಿದೆ.

ಗ್ರಾಮ ಕರಣಿಕರು ಅರ್ಹ 
ರೈತರ ಪಟ್ಟಿಯನ್ನು ಸಿದ್ಧಗೊಳಿಸುತ್ತಾರೆ. ಇದನ್ನು ಪರಿಶೀಲಿಸಿ ಕೃಷಿ ಇಲಾಖೆಗೆ ನೀಡಲಾಗು ತ್ತದೆ. ಸ್ವಯಂ ಘೋಷಣೆ ಇಲ್ಲದಿದ್ದರೆ ಸೌಲಭ್ಯ ಸಿಗುವುದಿಲ್ಲ.

-ಪ್ರದೀಪ್‌ ಕುಡೇìಕರ್‌, ಉಡುಪಿ ತಹಶೀಲ್ದಾರ್‌  

ಯಾರು ಅನರ್ಹರು?
–  2 ಹೆಕ್ಟೇರ್‌ಗಿಂತ ಹೆಚ್ಚು ಹಿಡುವಳಿ ಇರುವವರು (ನಂಜ/ಪುಂಜ/ಬಾಗಾಯ್ತು ಸಹಿತ)
–  ಭೂಮಿ ಹೊಂದಿರುವ ಸಂಘ ಸಂಸ್ಥೆಗಳು
–  ಕುಟುಂಬದಲ್ಲಿರುವ ಸಾಂವಿಧಾನಿಕ ಹುದ್ದೆ/ಸರಕಾರಿ ಅಧಿಕಾರಿ/ಜಿ.ಪಂ. ಅಧ್ಯಕ್ಷರ ವರೆಗಿನ ಜನಪ್ರತಿನಿಧಿಗಳು 
– 10 ಸಾವಿರ ರೂ. ಅಥವಾ ಹೆಚ್ಚು ಪಿಂಚಣಿ ಪಡೆಯುವವರು
– ಆದಾಯ ತೆರಿಗೆ ಪಾವತಿಸುವವರು
– ವೃತ್ತಿಪರರು (ವೈದ್ಯ, ವಕೀಲ, ಸಿಎ ಇತ್ಯಾದಿ)

Advertisement

Udayavani is now on Telegram. Click here to join our channel and stay updated with the latest news.

Next