ಮೈಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಮೈಸೂರು ಜಿಲ್ಲೆಯಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಜಾರಿಗೆ ತಂದಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಮೈಸೂರಿನ ಶೇ.95 ರಷ್ಟು ರೈತರು ನೋಂದಣಿ ಮಾಡಿಕೊಂಡಿರುವುದು ಗಮನಾರ್ಹ. ಈಗಾಗಲೇ ಯೋಜನೆಯು ಮೂರನೇ ಕಂತಿನ ಹಣವೂ ಬಂದಿದ್ದು, ಉಳಿದ ರೈತರ ನೋಂದಣಿ ಪ್ರಕ್ರಿಯೆಯೂ ನಡೆಯುತ್ತಿದೆ.
ಎರಡೂವರೆ ಲಕ್ಷ ರೈತರ ಗುರಿ: ಈ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ರೈತರ ನೋಂದಣಿಗೆ ಗುರಿ ನೀಡಲಾಗಿತ್ತು. ಈವರೆಗೆ 2.04 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇಲಾಖೆಯಿಂದ ದಿನಪತ್ರಿಕೆಗಳಲ್ಲಿ ಜಾಹೀರಾತು, ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಮಾಡಲಾಗಿದೆ. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ರಾಜ್ಯ ಸರಕಾರವೇ ಗುರುತಿಸಬೇಕಿದ್ದು, ನೋಂದಣಿಯಾದ ರೈತರ ದಾಖಲಾತಿಗಳನ್ನು ಗ್ರಾಮ ಲೆಕ್ಕಿಗರು ಪರಿಶೀಲಿಸಿ ಅಂತಿಮಗೊಳಿಸಿದ ನಂತರ ರಾಜ್ಯ ಸರ್ಕಾರ ಕೇಂದ್ರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಿದೆ.
ಮೊದಲಿಗೆ ಆಸಕ್ತಿ ಇರಲಿಲ್ಲ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ರೈತರು ನೋಂದಣಿ ಮಾಡಿಸಿಕೊಳ್ಳು ವಂತೆ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಭೇಟಿ ನೀಡುತ್ತಿದ್ದರೂ, ಮೊದ ಮೊದಲು ಯೋಜನೆಯಡಿ ಘೋಷಣೆಗಳನ್ನು ಸಲ್ಲಿಸಲು ಅನೇಕರು ಆಸಕ್ತಿ ತೋರಿ ಸುತ್ತಿಲ್ಲ. ಅರ್ಹ ರೈತರನ್ನು ನಾವೇ ಸಂಪರ್ಕಿಸುತ್ತಿದ್ದರೂ ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಲೋಕಸಭಾ ಚುನಾವಣೆಯ ನಂತರ ನೋಂದಣಿ ಪ್ರಕ್ರಿಯೆ ಪುನಾರಂಭವಾದ ನಂತರ ಹೆಚ್ಚು ಹೆಚ್ಚು ರೈತರು ಹೆಸರು ನೋಂದಣಿ ಮಾಡಿಕೊಂಡು, ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಅಧಿಕಾರಿಗಳ ಮಾತು.
ಅರ್ಹರಲ್ಲದವರೇ ಲಕ್ಷದಷ್ಟಿದ್ದಾರೆ: ಮೈಸೂರು ಜಿಲ್ಲೆಯಲ್ಲಿ 2010-11ರ ಅಂಕಿ ಅಂಶಗಳ ಪ್ರಕಾರ 3.49 ಲಕ್ಷ ಮಂದಿ ರೈತರಿದ್ದು, ಈವರೆಗೆ ಜಿಲ್ಲೆಯಲ್ಲಿ 2.04 ಲಕ್ಷ ಮಂದಿ ಯೋಜನೆಯ ಫಲಾನುಭವಿ ಗಳಾಗಿದ್ದಾರೆ. ಉಳಿದ ರೈತರು ಸರ್ಕಾರಿ ನೌಕರರು, ಸಾಂವಿಧಾನಿಕ ಹುದ್ದೆಯಲ್ಲಿರುವವರು, ವೃತ್ತಿಪರ ಕೆಲಸದಲ್ಲಿರುವವರು, ಕೆಲವು ಸಂಸ್ಥೆಗಳ ಹೆಸರಿನಲ್ಲಿ ಜಮೀನು ಇರುವುದು ಸೇರಿದಂತೆ 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ಕುಟುಂಬಗಳಾಗಿವೆ. ಈ ರೈತರು ಕಿಸಾನ್ ಸಮ್ಮಾನ್ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಇವರ ಸಂಖ್ಯೆ ಜಿಲ್ಲೆಯಲ್ಲಿ ಲಕ್ಷದಷ್ಟಿದೆ.
ಈ ಯೋಜನೆಗೆ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರೂ ಅರ್ಹರಾಗಿದ್ದು, ಕ್ಷೇತ್ರ ಸಿಬ್ಬಂದಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಹಳ್ಳಿಗಳಲ್ಲಿ ಮೈಕ್ ಮೂಲಕವೂ ಪ್ರಚಾರ ಮಾಡಿರುವುದರ ಪರಿಣಾಮ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಪತ್ರಿಕೆಗೆ ವಿವರಿಸಿದರು.
● ಸತೀಶ್ ದೇಪುರ