Advertisement

ಕಿಸಾನ್‌ ಸಮ್ಮಾನ್‌: ಶಿರಸಿಯಲ್ಲೇ ಹೆಚ್ಚು ನೋಂದಣಿ

12:40 PM Jun 23, 2019 | Suhan S |

ಶಿರಸಿ: ಪ್ರಧಾನ ಮಂತ್ರಿಗಳ ಕಿಸಾನ್‌ ಸಮ್ಮಾನ ಯೋಜನೆ ಬರಲಿರುವ ಜೂ.30 ಕ್ಕೆ ಕೊನೆಗೊಳ್ಳಲಿದ್ದು, ಜಿಲ್ಲಾಡಳಿತ ಅರ್ಹ ರೈತರು ದಾಖಲೆ ಸಹಿತ ಅರ್ಜಿ ಸಲ್ಲಿಕೆಗೆ ಮನವಿ ಮಾಡಿದೆ. ಇಡೀ ಜಿಲ್ಲೆಯಲ್ಲಿ ಶಿರಸಿಯಲ್ಲೇ ಅಧಿಕ ರೈತರು ಕಿಸಾನ್‌ ಸಮ್ಮಾನ ಯೋಜನೆಗೆ ಹೆಸರು ನೊಂದಾಯಿಸಿದ್ದಾರೆ.

Advertisement

ಪ್ರಧಾನ ಮಂತ್ರಿಗಳು ಲೋಕಸಭಾ ಚುನಾವಣೆಗೆ ಮೊದಲೇ ಘೋಷಣೆ ಮಾಡಿದ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ಮೂರು ಕಂತಿನಲ್ಲಿ ನೀಡುವ ಯೋಜನೆ ಇದು. ಪಹಣಿ ಪತ್ರಿಕೆ, ಆಧಾರ ಕಾರ್ಡ್‌ ಪ್ರತಿ, ಫೋಟೊ, ಬ್ಯಾಂಕ್‌ ಪಾಸ್‌ಬುಕ್‌ಗಳ ಪ್ರತಿ ಜೊತೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ವಿವಿಧ ಇಲಾಖೆ ಅಥವಾ ಗ್ರಾಪಂಗಳ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಮುದ್ರಿತ ಅರ್ಜಿ ಭರಣ ಮಾಡಿ ಸಲ್ಲಿಸಿದರೆ ಆಯಾ ಕೇಂದ್ರದಲ್ಲಿ ಕಂಪ್ಯೂಟರ್‌ನಿಂದ ದಾಖಲಿಸುತ್ತಾರೆ. ಇದಕ್ಕೆಂದೇ ಪ್ರತ್ಯೇಕ ಪಿಎಂ ಕಿಸ್ಸಾನ್‌ ಎಂಬ ವೆಬ್‌ಸೈಟ್ ಕೂಡ ಕಾರ್ಯಮಾಡುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಕೂಡ ಅರ್ಜಿ ಸಲ್ಲಿಸಬಹುದು.

ಕೆಲವು ತಾಲೂಕುಗಳಲ್ಲಿ ಶೇ.55ಕ್ಕಿಂತ ಅಧಿಕ ರೈತರು ಅರ್ಜಿ ಭರಣ ಮಾಡಬೇಕಿದ್ದು, ಆದಷ್ಟು ಶೀಘ್ರ ತುಂಬಿ ಕೊಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಶಿರಸೀಲೇ ಹೆಚ್ಚು: ಜಿಲ್ಲೆಯ ಎಲ್ಲಡೆ ಅರ್ಜಿ ಭರಣ ಕಾರ್ಯ ನಡೆಯುತ್ತಿದ್ದರೂ ಶಿರಸಿ ತಾಲೂಕಿನಲ್ಲಿ ಈವರೆಗೆ ಶೇ.40ರಷ್ಟು ಅರ್ಜಿ ಭರಣ ಆಗಿದೆ. ಕೆಲವರ ಖಾತೆಗಳಿಗೆ ಪ್ರಥಮ ಕಂತಾಗಿ 2 ಸಾವಿರ ರೂ. ಬಂದಿದೆ. ಇನ್ನು ಕೆಲವರಿಗೆ ಹಣ ದಾರಿಯಲ್ಲಿದೆ.

ಕಳೆದ ಮಾರ್ಚ್‌ನಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸ್ವೀಕಾರ ಆರಂಭಿಸಲಾಗಿತ್ತು. ಆಗಲೂ ಶಿರಸಿಯಲ್ಲಿ ಸರತಿ ಸಾಲಿತ್ತು. ಚುನಾವಣೆ ವೇಳೆ ನೀತಿ ಸಂಹಿತೆ ಕಾರಣದಿಂದ ಬಂದ್‌ ಆಗಿತ್ತು. ಈಗ ಮತ್ತೆ ಆರಂಭವಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಮೊದಲು ಐದು ಎಕರೆ ಒಳಗೆ ಇದ್ದವರಿಗೆ ಮಾತ್ರ ಅವಕಾಶ ಇತ್ತು. ಈಗ ಎಲ್ಲ ರೈತರಿಗೂ ಇದರ ಅವಕಾಶ ಸೃಷ್ಟಿಯಾಗಿದೆ.

Advertisement

ಎಲ್ಲೆಲ್ಲಿ ಎಷ್ಟೆಷ್ಟು? : ಜಿಲ್ಲೆಯಲ್ಲಿ 1,99,241 ರೈತರಿದ್ದಾರೆ. ಈ ಪೈಕಿ 47,812 ರೈತರು ತಮ್ಮ ಅರ್ಜಿಗಳನ್ನು ಸಲ್ಲಿಸಿ ಕಂಪ್ಯೂಟರ್‌ನಲ್ಲಿ ದಾಖಲಾಗಿದೆ. ಇನ್ನೂ ಶೇ.60ರಷ್ಟು ರೈತರ ವಿವರಗಳು ದಾಖಲಾಗಬೇಕಿದೆ.

ಅಂಕೋಲಾದದಲ್ಲಿ 22,763 ರೈತರಿದ್ದು 3059 ರೈತರು ಅರ್ಜಿ ಸಲ್ಲಿಸಿದ್ದಾರೆ. ಭಟ್ಕಳದಲ್ಲಿ 18033 ರೈತರಿದ್ದು 2636 ರೈತರು ಅರ್ಜಿ ಸಲ್ಲಿಸಿದ್ದಾರೆ. ದಾಂಡೇಲಿ ಹಾಗೂ ಹಳಿಯಾಳ ಸೇರಿ 11, 550 ರೈತರಿದ್ದು, 4432 ರೈತರು ಅರ್ಜಿ ಹಾಕಿದ್ದಾರೆ.

ಹೊನ್ನಾವರದಲ್ಲಿ 27,299 ರೈತರಲ್ಲಿ 5370 ರೈತರು, ಕಾರವಾರದಲ್ಲಿ 24,464ರಲ್ಲಿ 1745 ರೈತರು ಅರ್ಜಿ ಸಲ್ಲಿಸಿದ್ದಾರೆ. ಕುಮಟಾದಲ್ಲಿ 29,696ರಲ್ಲಿ 4233 ರೈತರು ಅರ್ಜಿ ಹಾಕಿದ್ದಾರೆ. ಮುಂಡಗೋಡದಲ್ಲಿ 11,073 ರೈತರಿದ್ದು 6201 ಅರ್ಜಿ ಸಲ್ಲಿಸಿದ್ದಾರೆ. ಸಿದ್ದಪುರದಲ್ಲಿ 17,971 ರೈತರಲ್ಲಿ 6058 ರೈತರು ಅರ್ಜಿ ಹಾಕಿದಾರೆ. ಶಿರಸಿಯಲ್ಲಿ 22,009 ರೈತರಿದ್ದು, ಈ ಪೈಕಿ 8737 ರೈತರು ದಾಖಲಿಸಿದ್ದಾರೆ. ಜೋಯಿಡಾದಲ್ಲಿ 5,596 ರೈತರಲ್ಲಿ 1908 ರೈತರು ಅರ್ಜಿ ಹಾಕಿದ್ದರೆ, ಯಲ್ಲಾಪುರದಲ್ಲಿ 8787ರಲ್ಲಿ 3421 ಅರ್ಜಿ ಹಾಕಿದ್ದಾರೆ.

 

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next