ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಸಾಲಮನ್ನಾ, ಪಿಂಚಣಿ ಸೇರಿದಂತೆ ರೈತರ ಹಲವು ಬೇಡಿಕೆಗಳನ್ನು ಪೂರೈಸಲು ಆಗ್ರಹಿಸಿ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಎಂಕೆ) ಸೋಮವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದೆ.
ಅಲ್ಲದೇ, ಬೇಡಿಕೆಗಳನ್ನು ಈಡೇರಿಸದಿದ್ದರೆ ಕೃಷಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಿಂತಲೂ ಬಹುದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದೆ.
ರಾಮ್‌ಲೀಲಾ ಮೈದಾನದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ರೈತ ಸಂಘದ 15 ಸದಸ್ಯರ ನಿಯೋಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ಕೋರಿಕೆ ಈಡೇರಿಸಲು ಮನವಿಪತ್ರ ಸಲ್ಲಿಸಿದ್ದಾರೆ. ಈ ಕುರಿತು ರೈತ ನಾಯಕ ದರ್ಶನ್ ಪಾಲ್ ಮಾತನಾಡಿ, ಏಪ್ರಿಲ್ 30ರಂದು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಲಿದ್ದೇವೆ. ನಮಗೂ ನಿತ್ಯ ಪ್ರತಿಭಟಿಸಲು ಇಷ್ಟವಿಲ್ಲ, ಆದರೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಹೋದರೆ, ಆಂದೋಲನ ಅನಿವಾರ್ಯವಾಗುತ್ತದೆ ಎಂದಿದ್ದಾರೆ.