Advertisement

ರೈತರಿಗೂ ಪಿಂಚಣಿ ನೀಡುವ ಕಿಸಾನ್‌ ಮಾನ್‌ ಧನ್‌

09:54 AM Sep 23, 2019 | sudhir |

ದೇಶದ ಬೆನ್ನೆಲುಬು ರೈತನಿಗೂ ಇನ್ನು ಪಿಂಚಣಿ ಸಿಗಲಿದೆ. ಕಿಸಾನ್‌ ಮಾನ್‌ ಧನ್‌ ಪಿಂಚಣಿ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಕೃಷಿಕನಿಗೆ ಬೆಂಬಲ ನೀಡಲು ಮಾಸಿಕವಾಗಿ 3,000 ರೂ.ಅನ್ನು ಪಿಂಚಣಿ ರೂಪದಲ್ಲಿ ನೀಡಲಿದೆ. ಹಾಗಾದರೆ ಏನಿದು ಯೋಜನೆ? ಯಾರೆಲ್ಲ ಈ ಯೋಜನೆಯಡಿಗೆ ಬರುತ್ತಾರೆ? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ.

Advertisement

ಏನಿದು ಯೋಜನೆ?
ಸಂಪೂರ್ಣ ಕೇಂದ್ರ ಸರಕಾರದ ಯೋಜನೆ. ಕೃಷಿಕರಿಗೆ ಇಳಿವಯಸ್ಸಿನಲ್ಲಿ ಪ್ರಯೋಜನವಾಗಲಿ ಎಂದು ಹಮ್ಮಿಕೊಳ್ಳಲಾಗಿದೆ. ರೈತರು ನಿರ್ದಿಷ್ಟ ಕಂತು ಪಾವತಿಸಿದರೆ, ಅಷ್ಟೇ ಮೊತ್ತವನ್ನು ಕೇಂದ್ರ ಸರಕಾರವೂ ಅವರ ಖಾತೆಗೆ ಹಾಕುತ್ತ ಹೋಗುತ್ತದೆ. ಅಲ್ಲದೇ ಅಗತ್ಯವಿದ್ದರೆ, ರೈತರು ತಾವು ಹಾಕಿದ ಹಣ ವಾಪಸ್‌ ಪಡೆಯಲೂ ಅವಕಾಶವಿದೆ. ಯೋಜನೆ ಸುಮಾರು 5 ಕೋಟಿಯಷ್ಟು ಸಾಮಾನ್ಯ ರೈತರಿಗೆ ಅನುಕೂಲ ಕಲ್ಪಿಸಲಿದೆ. ಮುಂದಿನ 3 ವರ್ಷಗಳಲ್ಲಿ ಇದಕ್ಕಾಗಿ ಕೇಂದ್ರ ಸರಕಾರ 10,774 ಕೋಟಿ ರೂ. ವಿನಿಯೋಗಿಸಲಿದೆ.

ಹಣ ಪಾವತಿ ಹೇಗೆ?
ರೈತರು ತಮ್ಮ ವಯಸ್ಸಿಗೆ ಅನುಗುಣವಾಗಿ 55 ರೂ.ನಿಂದ 200 ರೂ. ವರೆಗೆ ಮಾಸಿಕ ಕಂತುಗಳನ್ನು 60ನೇ ವಯಸ್ಸಿನ ವರೆಗೆ ಪಾವತಿಸಬೇಕು. 60 ವರ್ಷದ ಬಳಿಕ ಸರಕಾರ ಮಾಸಿಕವಾಗಿ 3,000 ರೂ.ಗಳನ್ನು ಪಿಂಚಣಿ ರೂಪದಲ್ಲಿ ನಿಮ್ಮ ಖಾತೆಗೆ ನೀಡುತ್ತದೆ.

ಸರಕಾರದ ಪಾಲೂ ಇದೆ
ರೈತರು ಪಾವತಿಸುವ ಕಂತಿನ ಹಣಕ್ಕೆ ಸಮನಾಗಿ ಕೇಂದ್ರ ಸರಕಾರವೂ ಹಣ ಸೇರಿಸುತ್ತದೆ. ಉದಾ: ರೈತ ಮಾಸಿಕ 200 ರೂ. ಪಾವತಿ ಮಾಡುತ್ತಿದ್ದರೆ ರೈತನ 200 ಮತ್ತು ಸರಕಾರ 200 ರೂ. ಸೇರಿಸಿ ಒಟ್ಟು 400 ರೂ. ರೈತರ ಖಾತೆಯಲ್ಲಿ ಜಮೆಯಾಗುತ್ತದೆ.

ನೋಂದಣಿಗೆ ಏನೆಲ್ಲ ಅಗತ್ಯ
ಆಧಾರ್‌ ಕಾರ್ಡ್‌, ಆದಾಯ ದೃಢೀಕರಣ ಪತ್ರ, ಪಡಿತರ ಚೀಟಿ (ರೇಶನ್‌ ಕಾರ್ಡ್‌), 2 ಭಾವ ಚಿತ್ರಗಳು, ಬ್ಯಾಂಕ್‌ ಖಾತೆ ಪುಸ್ತಕ, ಆಧಾರ್‌ ಲಿಂಕ್‌ ಆಗಿದ್ದ ಮೊಬೈಲ್‌ ಸಂಖ್ಯೆಬೇಕಾಗುತ್ತದೆ.

Advertisement

ನೋಂದಣಿ ಹೇಗೆ?
ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದ ಮೂಲಕ ಪ್ರಧಾನ ಮಂತ್ರಿ ಕಿಸಾನ್‌ ಮಾನ್‌ ಧನ್‌ (ಪಿಎಂ-ಕೆಎಂವೈ) ನಲ್ಲಿ ರೈತರು ಯಾವುದೇ ಶುಲ್ಕ ನೀಡದೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ಈ ಯೋಜನೆ ಉದ್ದೇಶ?
ರೈತರ ಆದಾಯವನ್ನು ಮುಂದಿನ 5 ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಕೃಷಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ.

ವಿಪತ್ತು ಸಂಭವಿಸಿದರೆ?
ರೈತನಿಗೆ ಮಾತ್ರವಲ್ಲ, ಆತನ ಪತ್ನಿಗೂ ಯೋಜನೆ ಲಾಭ ದೊರಕುವಂತೆ ರೂಪಿಸಲಾಗಿದೆ. ಒಂದು ವೇಳೆ ಯೋಜನೆಯಲ್ಲಿರುವ ರೈತ 60 ವರ್ಷದ ಮೊದಲೇ ಮೃತಪಟ್ಟರೆ, ಆತನ ಪತ್ನಿ ಮುಂದಿನ ಕಂತುಗಳನ್ನು ತುಂಬುತ್ತ ಹೋಗಬಹುದು. ಹಾಗೆಯೇ, ಮೃತ ರೈತನ 60ನೇ ವಯಸ್ಸಿನ ಬಳಿಕ ಪಿಂಚಣಿ ಪಡೆದುಕೊಳ್ಳಬಹುದು. ಒಂದು ವೇಳೆ ರೈತ 60 ವರ್ಷಕ್ಕೂ ಮೊದಲೇ ಮೃತನಾದ ಸಂದರ್ಭ ಪತ್ನಿಗೆ ಯೋಜನೆಯಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಅಲ್ಲಿವರೆಗೆ ಪಾವತಿಸಿದ ಹಣ ಮತ್ತು ಬಡ್ಡಿ ಹಣ ಪಡೆಯಲು ಅವಕಾಶವಿದೆ. ಅಥವಾ ರೈತ ದಂಪತಿ ಮೃತಪಟ್ಟರೆ, ಯೋಜನೆಯ ನಾಮ ನಿರ್ದೇಶಕರಿಗೆ ಇದರ ಫ‌ಲ ಸಿಗಲಿದೆ.

ಬೇಡವಾದರೆ…
ಹಣ ಪಾವತಿಸಲು ರೈತರಿಗೆ ಅಸಾಧ್ಯವಾದರೆ ಕನಿಷ್ಠ 5 ವರ್ಷಗಳ ಬಳಿಕ ಈ ಯೋಜನೆಯಿಂದ ಹೊರಬರಬಹುದಾಗಿದೆ. ಇಂತಹ ವೇಳೆ ರೈತರು ಪಾವತಿಸಿದ್ದ ಹಣಕ್ಕೆ ಸಮನಾದ ಬಡ್ಡಿಯನ್ನು ಸೇರಿಸಿ ಸರಕಾರ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next