ಹಾಸನ: ರೈತರ ಹಣಕಾಸಿನ ವ್ಯವಹಾರಕ್ಕೆ ಹಾಗೂ ಸಾಲ ಸೌಲಭ್ಯ ಪಡೆಯಲು ನೆರವಾಗುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಈಗಾಗಲೇ ಜಾರಿಯಾಗಿದ್ದು, ಜಿಲ್ಲೆಯಲ್ಲಿ 1,24,563 ಕಿಸಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ತಿಳಿಸಿದರು.
ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಹಾಗೂ ವಿವಿಧ ಯೋಜನೆಗಳಿಗೆ ಪ್ರಧಾನ ಮಂತ್ರಿಯವರು ಶನಿವಾರ ಚಾಲನೆ ನೀಡಿದ ಕಾರ್ಯಕ್ರಮವನ್ನು ನೇರ ವೀಕ್ಷಣೆಗಾಗಿ ಹಾಗೂ ಸಾಂಕೇತಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗಾಗಿ ಎಚ್.ಡಿ.ಸಿ.ಸಿ ಬ್ಯಾಂಕ್‌ನ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಕೇತಿಕವಾಗಿ ವಿತರಣೆ: ಸರ್ಕಾರದ ಆದೇಶದಂತೆ ಫೆ.8 ರಿಂದ 29ರೊಳಗೆ ನೋಂದಣಿಯಾಗಿರುವ 3,905 ರೈತರಿಗೆ ಸಾಲ ಮಂಜೂರು ಮಾಡುವುದರ ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಇಂದು ಸಾಂಕೇತಿಕವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಿಸಾನ್ ಸಮ್ಮಾನ್ ಸೌಲಭ್ಯ: ಜಂಟಿ ಕೃಷಿ ನಿರ್ದೇಶಕ ಮಧುಸೂಧನ್ ಮಾತನಾಡಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 4 ತಿಂಗಳಿಗೆ ಒಂದು ಬಾರಿ 2 ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ.ಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.
ಸರ್ಕಾರವು ರೈತರಿಗೆ ನೀಡುವ ಹಲವಾರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಕಾರ್ಡ್ ಪಡೆದವರು ಮುಂದಿನ ದಿನಗಳಲ್ಲಿ ಕೇಂದ್ರದ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ನೆರವು ಹಾಗೂ ಸಾಲಸೌಲಭ್ಯವನ್ನು ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿದೇಶಕರಾದ ಸತೀಶ್, ಜಯರಾಂ, ವ್ಯವಸ್ಥಾಪಕ ನಿರ್ದೇಶಕ ಕುಮಾರ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿ..ಜಿ. ಭಟ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.