Advertisement

ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಕೀರ್ತನಾ ಆಯ್ಕೆ

09:33 PM Nov 18, 2019 | Lakshmi GovindaRaj |

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ನ.29, 30ರಂದು ನಡೆಯಲಿರುವ ಪ್ರಥಮ ಅಖೀಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತುಮಕೂರಿನ ಕೀರ್ತನ ನಾಯಕ್‌ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ಆತಿಥ್ಯ ವಹಿಸಿರುವ ಶ್ರೀ ಆದಿಚುಂಚನ‌ಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ವಾಮೀಜಿಯವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೀರ್ತನಾ ನಾಯಕ್‌ ಆಯ್ಕೆಯಾದರೆ, ಸಹ ಅಧ್ಯಕ್ಷರಾಗಿ ಮಂಡ್ಯದ ರೇವಂತ್‌ ರಾಜೀವ್‌, ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯುಮ್ನಮೂರ್ತಿ, ದೆಹಲಿಯ ಅಭಿಷೇಕ್‌ ಉಭಾಳೆಯವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಕವಿ ಗೋಷ್ಠಿ ಅಧ್ಯಕ್ಷರ ಆಯ್ಕೆ: ವಿಚಾರಗೋಷ್ಠಿ, ಕವಿಗೋಷ್ಠಿಯ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಬಿ.ಅನೀಶ್‌, ಮಹಾರಾಷ್ಟ್ರದ ನಿಖೀತಾ ಶಿವಾನಂದ ಕೋನಾಪುರೆ, ರಾಯಚೂರಿನ ಶಿವಶಂಕರ ಸ್ವಾಮಿ, ಕಾಸರಗೋಡಿನ ಕೆ.ಸೃಷ್ಟಿಶೆಟ್ಟಿ, ರಾಮನಗರದ ಆನಂದ್‌, ಬೆಂಗಳೂರಿನ ಸೂರ್ಯ ಸಾರಥಿ, ಬಾಗಲಕೋಟೆಯ ಭೂಮಿಕಾ ಮಗದುಮ್‌, ಚಿಕ್ಕಮಗಳೂರಿನ ವೈಷ್ಣವಿ ಎನ್‌. ರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರ ನೀಡಿದರು.

ಪಾರದರ್ಶಕವಾಗಿ ಅಧ್ಯಕ್ಷರ ಆಯ್ಕೆ: ಮಕ್ಕಳೇ ಸಮ್ಮೇಳನದ ಕೇಂದ್ರ ಬಿಂದುಗಳಾಗಿರುವುದರಿಂದ ಸರ್ವಾಧ್ಯಕ್ಷತೆ, ಸಹಾಧ್ಯಕ್ಷತೆ ಹಾಗೂ ವಿವಿಧ ಗೋಷ್ಠಿಗಳಿಗೆ ಮಕ್ಕಳೇ ಅಧ್ಯಕ್ಷತೆ ವಹಿಸಲಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಪಾರದರ್ಶಕ ಕ್ರಮಗಳನ್ನು ಅನುಸರಿಸಲಾಗಿದೆ ಎಂದರು. ಪ್ರಬಂಧ ರಚನೆ, ಆಶುಭಾಷಣ ಸ್ವರಚಿತ ಕವನವಾಚನ, ಉಕ್ತಲೇಖನ ಸ್ಪರ್ಧೆಗಳನ್ನು ಏರ್ಪಡಿಸಿ ಆ ಸ್ಪರ್ಧೆಗಳಲ್ಲಿ ಅತ್ಯುತ್ತಮ ಜ್ಞಾನ ಉಳ್ಳವರನ್ನು ಆಯ್ಕೆ ಮಾಡಲಾಯಿತು.

ಸ್ಪರ್ಧೆಗಳಲ್ಲಿ ಹೊರ ರಾಜ್ಯಗಳಾದ ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಗೋವಾ, ಮುಂಬೈ, ಚೆನ್ನೈನಿಂದಲೂ ಮಕ್ಕಳು ಆಮಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳು ಉತ್ತಮ ಪ್ರತಿಭೆ ಪ್ರದರ್ಶಿಸಿದ್ದರು. ಹಾಗಾಗಿ ಸರ್ವಾಧ್ಯಕ್ಷರ ಆಯ್ಕೆ ಮಾಡಲು ಗೊಂದಲವೂ ಉಂಟಾಗಿತ್ತು. ಅಂತಿಮವಾಗಿ ತುಮಕೂರಿನ ಕೀರ್ತನಾ ನಾಯಕ್‌ ಅವರು ಸರ್ವ ಸಮ್ಮೇಳದ ಸರ್ವಾಧ್ಯಕ್ಷರಾಗಿ ಕೀರ್ತನಾ ನಾಯಕ್‌ ಆಯ್ಕೆಯಾದರು ಎಂದು ತಿಳಿಸಿದರು.

Advertisement

8 ವರ್ಷಗಳಿಂದ ಮಕ್ಕಳ ಸಮ್ಮೇಳನ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್‌. ಅಶೋಕ್‌ ಅವರು ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ಕಳೆದ 8 ವರ್ಷಗಳಿಂದ ನಿರಂತರವಾಗಿ ಕಾರ್ಯಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ಪ್ರಥಮ ಅಖೀಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ದೇಶದ ವಿವಿಧ ರಾಜ್ಯಗಳಿಂದ ಮಕ್ಕಳು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಮಕ್ಕಳಿಗೆ ಊಟ, ವಸತಿ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಪ್ರಕಾಶ್‌, ಬಿಜಿಎಸ್‌ ಪ.ಪೂ.ಕಾಲೇಜಿನ ಪಾಂಶುಪಾಲ ಚಂದ್ರಶೇಖರ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನಾಧ್ಯಕ್ಷೆ ಕೀರ್ತನಾ ಸಾಹಿತ್ಯಾಭಿರುಚಿ
ಹಾಸನ: ನಗರದ ಕ್ರೀಡಾಂಗಣದಲ್ಲಿ ನ.29 ಮತ್ತು 30 ರಂದು ನಡೆಯಲಿರುವ ಪ್ರಥಮ ಅಖೀಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ತುಮಕೂರಿನ ಕೀರ್ತನಾ ನಾಯಕ್‌ ಅವರು ದ್ವಿತೀಯ ಪಿ.ಯು. (ಪಿಸಿಎಂಸಿ) ವಿದ್ಯಾರ್ಥಿನಿ. ಕೊರಟಗೆರೆಯ ಆಳ್ವಾಸ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕೀರ್ತನಾ ತುಮಕೂರಿನ ನಿವಾಸಿಗಳಾದ ನರಸಿಂಹ ನಾಯಕ್‌ ಮತ್ತು ಪದ್ಮಾವತಿ ದಂಪತಿ ಪುತ್ರಿ.

ಈ ದಂಪತಿ ಕೃಷಿಕರಾದರೂ ಸಾಹಿತ್ಯಾಸಕ್ತರಾಗಿದ್ದಾರೆ. ಹಾಗಾಗಿ ಕಿರ್ತನಾ ಅವರಲ್ಲೂ ಸಾಹಿತ್ಯ ಅಭಿರುಚಿ ಬೆಳೆದಿದೆ. ಈಗಾಗಲೇ ಕೀರ್ತನಾ ಎರಡು ಕೃತಿಗಳನ್ನು ರಚಿಸಿದ್ದು, ಕಾಲ ಬದಲಾಗುತ್ತಿದೆ ಎಂಬ ಕೃತಿಯ ಜೊತೆಗೆ ಮತ್ತೂಂದು ಕವನ ಸಂಕಲನವನ್ನೂ ರಚಿಸಿದ್ದಾರೆ. ಈಗ ಅಖೀಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next