ಎಲ್ಲರ ಲೈಫ್ನಲ್ಲೂ ಕಿರಿಕ್ ಅನ್ನೋದು ಮಾಮೂಲು. ಕಿರಿಕ್ ಇಲ್ಲದ ಲೈಫ್ ಯಾರದ್ದು ಇದೆ ಹೇಳಿ? ಈಗ ಯಾಕೆ ಈ ಕಿರಿಕ್ ವಿಷಯ ಅಂತೀರಾ? ಅದಕ್ಕೊಂದು ಕಾರಣವಿದೆ. ಈಗ ಇದೇ ಲೈಫ್ನಲ್ಲಿ ಏನೇನು ಕಿರಿಕ್ ಬರುತ್ತವೆ. ಯಾರ್ಯಾರು ಏನೇನು ಕಿರಿಕ್ ಅನುಭವಿಸುತ್ತಾರೆ ಎಂಬ ಅಂಶಗಳನ್ನೆ ಇಟ್ಟುಕೊಂಡು “ಕಿರಿಕ್ ಲೈಫ್’ ಅನ್ನೋ ಹೆಸರಿನಲ್ಲೇ ಸಿನಿಮಾವೊಂದು ತಯಾರಾಗುತ್ತಿದೆ.
ಕೆಲ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಗುರುರಾಜ ಕುಲಕರ್ಣಿ ಈ ಕಿರಿಕ್ ಲೈಫ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ನವನಟ ಶರತ್ ಬಾಬು, ಸುವಾರ್ಥ, ನಿಖೀಲ್, ಮಹೇಶ್, ಪ್ರಕಾಶ್ ತಳಿಮೊದಲಾದ ನವ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸದ್ದಿಲ್ಲದೆ ಸೆಟ್ಟೇರಿರುವ ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದಲ್ಲಿರುವ ಕಿರಿಕ್ ವಿಷಯಗಳ ಬಗ್ಗೆ ಮಾತನಾಡಿತು. ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಗುರುರಾಜ ಕುಲಕರ್ಣಿ, ಇದೊಂದು ಐವರು ಹುಡುಗರ ಕಥೆ. ಸ್ಲಂ ಪ್ರದೇಶದಲ್ಲಿ ಬೆಳೆದ ಐವರು ಹುಡುಗರು ತಮ್ಮ ಲೈಫ್ನಲ್ಲಿ ಏನೇನು ಸೋಲು-ಸವಾಲುಗಳನ್ನು ಎದುರಿಸುತ್ತಾರೆ.
ಕೊನೆಗೂ ಈ ಹುಡುಗರು ತಮ್ಮ ಲೈಫ್ನಲ್ಲಿ ತಾವಂದುಕೊಂಡ ಸಾಧನೆ ಮಾಡುತ್ತಾರಾ ಅನ್ನೋದೆ ಚಿತ್ರದ ಕಥೆಯ ಒಂದು ಎಳೆ. ನಾನು ಕಂಡ ಕೆಲವು ನೈಜ ಘಟನೆಗಳನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಮೊದಲು ಈ ಕಥೆಯನ್ನ ಶಾರ್ಟ್‌ಫಿಲಂ ಮಾಡುವ ಯೋಚನೆಯಿತ್ತು. ಅದೇ ವೇಳೆ ನಿರ್ಮಾಪಕರು ಸಿಕ್ಕಿದ್ದರಿಂದ ಫೀಚರ್ ಫಿಲಂ ಮಾಡಲು ಮುಂದಾದೆವು.
ಈ ಚಿತ್ರದಲ್ಲಿ ಕಾಮಿಡಿ, ಲವ್, ಸೆಂಟಿಮೆಂಟ್, ಎಮೋಷನ್ಸ್, ಮನರಂಜನೆಯ ಜೊತೆಗೊಂದು ಮೆಸೇಜ್ ಎಲ್ಲವೂ ಇದೆ. ಬಹುತೇಕ ಹೊಸ ಪ್ರತಿಭೆಗಳನ್ನೆ ಇಟ್ಟುಕೊಂಡು ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದರು. ಉದ್ಯಮಿ ಸಂದೇಶ್ ಹಾಸನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಸಂದೇಶ್, ಚಿತ್ರದ ಕಥೆ ಕೇಳಿದಾಗ ಇಷ್ಟವಾಗಿ ಇದನ್ನು ನಿರ್ಮಿಸುವ ಯೋಚನೆ ಮಾಡಿದೆ.
ಇಂದಿನ ಪ್ರೇಕ್ಷಕರ ಅಭಿರುಚಿಯನ್ನ ಗಮನದಲ್ಲಿ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ನೋಡುಗರಿಗೆ ಚಿತ್ರ ಇಷ್ಟವಾಗುವುದು ಎಂಬ ಭರವಸೆಯಿದೆ. ಆದಷ್ಟು ಬೇಗ ಚಿತ್ರವನ್ನು ಪೂರ್ಣಗೊಳಿಸಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ ಎಂದರು. “ಕಿರಿಕ್ ಲೈಫ್’ ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ದುರ್ಗ ಪ್ರಸಾದ್ ಪಿ.ಎಸ್ ಸಂಕಲನ ಕಾರ್ಯವಿದೆ.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಶಿವು ಜಮಖಂಡಿ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಹಾಸನ, ಸಕಲೇಶಪುರ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯಕ್ಕೆ ಕಿರಿಕ್ ಲೈಫ್ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ಒಟ್ಟಾರೆ ಸ್ಲಂ ಹುಡುಗರ ಕಿರಿಕ್ ಲೈಫ್ ಕಹಾನಿ ಹೇಗಿದೆ ಅನ್ನೋದು ಗೊತ್ತಾಗಬೇಕಾದರೆ ಇನ್ನೂ ಕೆಲವು ತಿಂಗಳು ಕಾಯಬೇಕು.