“ಭೀಮಸೇನ ನಳಮಹಾರಾಜ’ ಹೀಗೊಂದು ಚಿತ್ರ ಆರಂಭವಾಗಿದೆ. ಟೈಟಲ್ ಕೇಳಿ ಇದು ಮತ್ತೂಂದು ಪೌರಾಣಿಕ ಚಿತ್ರನಾ ಎಂದು ನೀವು ಆಶ್ವರ್ಯಪಡಬೇಡಿ. ಖಂಡಿತಾ, ಇದು ಪೌರಾಣಿಕ ಚಿತ್ರವಲ್ಲ. ಇಂದಿನ ಟ್ರೆಂಡ್‌ಗೆ ತಕ್ಕಂತಹ ಚಿತ್ರ. ಕಾರ್ತಿಕ್ ಸರಗೂರು ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಜೀರ್‌ಜಿಂಬೆ’ ಎಂಬ ಸಿನಿಮಾ ಮಾಡಿದ್ದ ಕಾರ್ತಿಕ್ ಅವರು ಈಗ “ಭೀಮಸೇನ ನಳಮಹಾರಾಜ’ ಮಾಡುತ್ತಿದ್ದಾರೆ.
ಈ ಚಿತ್ರವನ್ನು ಪುಷ್ಕರ್ ಫಿಲಂಸ್‌ನ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪರಂವಾ ಸ್ಟುಡಿಯೋಸ್‌ನ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅರವಿಂದ್ ಅಯ್ಯರ್ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. “ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಅರವಿಂದ್‌ಗೆ ಈಗ “ಭೀಮಸೇನ ನಳಮಹಾರಾಜ’ ಮೂಲಕ ಹೀರೋ ಆಗುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಆರೋಹಿ ನಾರಾಯಣ್ ಹಾಗೂ ಪ್ರಿಯಾಂಕಾ ನಟಿಸುತ್ತಿದ್ದಾರೆ.
ಆರೋಹಿ ಈ ಹಿಂದೆ ರವಿಚಂದ್ರನ್ ಅವರ “ದೃಶ್ಯ’ದಲ್ಲಿ ಮಗಳಾಗಿ ನಟಿಸಿದ್ದರು. ಪ್ರಿಯಾಂಕಾ “ಗಣಪ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ “ಭೀಮಸೇನ ನಳಮಹಾರಾಜ’ ಎಂಬ ಟೈಟಲ್ ಇಡಲು ಏನು ಕಾರಣ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ನಿರ್ಮಾಪಕರಲ್ಲೊಬ್ಬರಾದ ಮಲ್ಲಿಕಾರ್ಜುನಯ್ಯ ಉತ್ತರಿಸುತ್ತಾರೆ. “ಮಹಾಭಾರತದ ಭೀಮ ಹಾಗೂ ನಳಮಹಾರಾಜನ ಪಾತ್ರಗಳನ್ನು ನೀವು ಗಮನಿಸಿದರೆ ಇಬ್ಬರು ತಮ್ಮ ತಮ್ಮ ಹೆಂಡತಿಯರನ್ನು ಅತಿಯಾಗಿ ಪ್ರೀತಿಸುತ್ತಿದ್ದರು.
ಜೊತೆಗೆ ಅವರಿಬ್ಬರೂ ಅಡುಗೆಯಲ್ಲೂ ಎತ್ತಿದ ಕೈ. ನಮ್ಮ ಚಿತ್ರದ ನಾಯಕನಿಗೂ ಆ ತರಹದ ಗುಣವಿರುತ್ತದೆ. ಆತ ಕೂಡಾ ಹೆಂಡತಿಯನ್ನು ತುಂಬಾ ಪ್ರೀತಿಸುವ ಜೊತೆಗೆ ಉತ್ತಮ ಅಡುಗೆ ಮಾಡುವವನಾಗಿರುತ್ತಾನೆ. ಇಂತಹ ಪಾತ್ರದ ಮೂಲಕ ಚಿತ್ರ ಸಾಗುತ್ತದೆ’ ಎನ್ನುತ್ತಾರೆ ಪುಷ್ಕರ್. ಇದೊಂದು ಎಮೋಶನಲ್ ಡ್ರಾಮಾ ಆಗಿದ್ದು, ಅರ್ಥಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಆಗಲಿದೆ ಎನ್ನುವುದು ಅವರ ಮಾತು.
ಈ ಚಿತ್ರದಲ್ಲಿ “ಸರಿಗಮಪ’ ಮೂಲಕ ಜನಪ್ರಿಯಳಾದ ಬೇಬಿ ಆದ್ಯ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಚ್ಯುತ್ ಕುಮಾರ್ ಕೂಡಾ ನಟಿಸುತ್ತಿದ್ದಾರೆ. “ಬಾಹುಬಲಿ’ ಚಿತ್ರದ ಛಾಯಾಗ್ರಾಹಕ ಸೆಂಥಿಲ್ ಅವರಿಗೆ ಫಸ್ಟ್ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿದ್ದ ರವೀಂದ್ರನಾಥ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಅವರ ಸಂಗೀತ ಚಿತ್ರಕ್ಕಿದೆ. ಕಳಸ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.