Advertisement
ಕೈ ಹಿಡಿದ ಅದೃಷ್ಟಕೆಲವರು ಎಷ್ಟೆಷ್ಟೋ ಪ್ರಯತ್ನಪಟ್ಟು ಅವಕಾಶಗಿಟ್ಟಿಸಿದರೂ ಅದರಿಂದ ಯಾವುದೇ ಲಾಭವಾಗುವುದಿಲ್ಲ. ಅವಕಾಶ ಸಿಗುತ್ತದೆಯೇ ಹೊರತು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆ ತೋರಿಸೋದಿಲ್ಲ. ಆದರೆ, ಸಂಯುಕ್ತಾ ಮಾತ್ರ ಸಿಕ್ಕ ಅವಕಾಶವನ್ನು ಚಿಂದಿ ಉಡಾಯಿಸಿಬಿಟ್ಟಿದ್ದಾರೆಂಬ ಮಾತಿದೆ. ಹಾಗಂತ ಸಂಯುಕ್ತಾ ಅವಕಾಶಕ್ಕಾಗಿ ಯಾರಲ್ಲೂ ಕೈ ಚಾಚಿಲ್ಲ. “ಕಿರಿಕ್ ಪಾರ್ಟಿ’ ಸಿನಿಮಾದ ಅವಕಾಶ ಸಿಕ್ಕಿದ್ದು ಕೂಡಾ ಅಚಾನಕ್ ಆಗಿ ಎಂದರೆ ನೀವು ನಂಬಲೇಬೇಕು. ಹೌದು, ಆಗಷ್ಟೇ “ಕಿರಿಕ್ ಪಾರ್ಟಿ’ ಚಿತ್ರದ ಕಥೆ ಫೈನಲ್ ಆಗಿ ನಾಯಕಿಗಾಗಿ ಹುಡುಕುತ್ತಿದ್ದಾಗ ಚಿತ್ರತಂಡಕ್ಕೆ ಫೋಟೋವೊಂದು ಕಾಣುತ್ತದೆ. ಫೋಟೋ ನೋಡಿದ ಕೂಡಲೇ ಈ ಹುಡುಗಿಯ ಲುಕ್ ತಮ್ಮ ಕಥೆಗೆ ಹೊಂದಿಕೆಯಾಗುತ್ತದೆಂದುಕೊಂಡು ನೇರವಾಗಿ ಕರೆಸಿ ಆಡಿಷನ್ ಕೊಡುತ್ತಾರೆ. ಸಂಯುಕ್ತಾ ಆಡಿಷನ್‌ನಲ್ಲಿ ಹಿಂದೆ ಬೀಳುವುದಿಲ್ಲ. ಮತ್ತೂಮ್ಮೆ ಎಲ್ಲರಿಂದಲೂ ಮೆಚ್ಚುಗೆ ಪಡೆದ ಸಂಯುಕ್ತಾ ನೇರವಾಗಿ “ಕಿರಿಕ್’ ತಂಡ ಸೇರಿಕೊಳ್ಳುತ್ತಾರೆ. “ನನ್ನ ಫೋಟೋ ನೋಡಿ ನನಗೆ ಆಡಿಷನ್‌ಗೆ ಕರೆದರು. ಆಡಿಷನ್ ನಂತರ ನೇರವಾಗಿ ಸೆಲೆಕ್ಟ್ ಆದೆ. ಈ ಸಿನಿಮಾದಲ್ಲಿ ನಾನು ನಟಿಸುತ್ತೇನೆ, ನನಗೆ ಅವಕಾಶ ಸಿಗುತ್ತದೆ. ಇಷ್ಟೊಂದು ಮೆಚ್ಚುಗೆ ಸಿಗುತ್ತದೆ ಎಂದು ನಾನಂದುಕೊಂಡಿರಲಿಲ್ಲ’ ಎಂದು ತಮಗೆ ಸಿಕ್ಕ ಅವಕಾಶದ ಬಗ್ಗೆ ಹೇಳುತ್ತಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಇವರ ಪಾತ್ರ ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಪ್ರಮುಖವಾಗಿದೆ. ನಾಯಕನನ್ನು ಲವ್ ಮಾಡುತ್ತಲೇ ಆತನ ಭಾವನೆಗಳಿಗೆ ಸ್ಪಂದಿಸುವ ಪಾತ್ರದಲ್ಲಿ ಸಂಯುಕ್ತಾ ತುಂಬಾ ಚೆನ್ನಾಗಿ ನಟಿಸುವ ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ್ದಾರೆ.
ನೀವು “ಕಿರಿಕ್ ಪಾರ್ಟಿ’ ಸಿನಿಮಾ ನೋಡಿದರೆ ನಿಮಗೆ ಸಂಯುಕ್ತಾ ಮಾಡಿರುವ ಪಾತ್ರದ ಬಗ್ಗೆ ಗೊತ್ತಿರುತ್ತದೆ. ಸಖತ್ ಬೋಲ್ಡ್ ಅಂಡ್ ತರೆಲ ಪಾತ್ರ. ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ತರೆಲ ಪಾತ್ರ ಬಂದಂತಿರಲಿಲ್ಲ. ಸಖತ್ ಕ್ಯೂಟ್ ಆಗಿ ಪಟಪಟನೇ ಮಾತನಾಡುತ್ತಲೇ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಡುವ ಪಾತ್ರದಲ್ಲಿ ಸಂಯುಕ್ತಾ ಮಿಂಚಿದ್ದರು. ಗಾಂಧಿನಗರದಲ್ಲಿ ಒಂದು ನಿಯಮವಿದೆ. ಯಾರಾದರೂ ಒಂದು ಪಾತ್ರದಲ್ಲಿ ಮಿಂಚಿದರೆ, ಮುಂದೆ ಅವರಿಗೆ ಅದೇ ಪಾತ್ರವನ್ನು ಆಫರ್ ಮಾಡುವ ನಿರ್ದೇಶಕರ ಸಂಖ್ಯೆ ಹೆಚ್ಚಿರುತ್ತದೆ. ಸಂಯುಕ್ತಾ ವಿಷಯದಲ್ಲೂ ಇದೇ ಆಗಿದೆ. ಸಖತ್ ಬೋಲ್ಡ್ ಪಾತ್ರ ಮೂಲಕ ಗಮನ ಸೆಳೆದ ಸಂಯುಕ್ತಾಗೆ ಈಗ ಮತ್ತೆ ಅಂತಹುದೇ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ಆದರೆ, ಸಂಯುಕ್ತಾಗೆ ಮತ್ತೆ ಅಂತಹುದೇ ಪಾತ್ರ ಮಾಡಲು ಇಷ್ಟವಿಲ್ಲವಂತೆ. ಮಾಡಿದ ಪಾತ್ರವನ್ನೇ ಮಾಡಿದರೆ ತನ್ನ ಟ್ಯಾಲೆಂಟ್ ತೋರಿಸಲು ಅವಕಾಶವಿಲ್ಲ ಎಂಬುದು ಸಂಯುಕ್ತಾಗೆ ಗೊತ್ತಿದೆ. ಹಾಗಾಗಿ, ಯಾವುದೆ ಆಫರ್‌ಗಳನ್ನು ಒಪ್ಪಿಕೊಂಡಿಲ್ಲ. “ಸದ್ಯ “ಕಿರಿಕ್ ಪಾರ್ಟಿ’ ಹಿಟ್ ಆದ ಖುಷಿಯಲ್ಲಿದ್ದೇನೆ. ಸಿನಿಮಾಕ್ಕೆ ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನ್ನ ಪಾತ್ರವನ್ನೂ ಜನ ಇಷ್ಟಪಟ್ಟಿದ್ದಾರೆ. ಇಲ್ಲಿವರೆಗೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.ನನಗೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂಬ ಆಸೆ ಇಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾ ಮಾಡಿದರೆ ಸಾಕು ಎಂಬ ಆಸೆ ಇದೆ. ಬಂದ ಕಥೆಗಳನ್ನು ಕೇಳುತ್ತಿದ್ದೇನೆ. ಯಾವುದೂ ಇನ್ನೂ ಫೈನಲ್ ಆಗಿಲ್ಲ’ ಎಂಬುದು ಸಂಯುಕ್ತಾ ಮಾತು.
Related Articles
Advertisement
ಬರಹ: ರವಿ ರೈ; ಚಿತ್ರಗಳು: ಮನು ಮತ್ತು ಸಂಗ್ರಹ