ಮುಂಬಯಿ: ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ಬಾಲಿವುಡ್ ನಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವಿಭಿನ್ನ ಕಥಾಹಂದರವುಳ್ಳ ಸಿನಿಮಾ ರಿಲೀಸ್ ಗೆ ದಿನಗಣನೆ ಬಾಕಿ ಉಳಿದಿದ್ದು, ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಸಿನಿಮಾದ ಬಗ್ಗೆ ಕುತೂಹಲವೂ ಹೆಚ್ಚಿದೆ.
ಸೋಮವಾರ (ಫೆ.19 ರಂದು) ದೆಹಲಿಯಲ್ಲಿ ‘ಲಾಪತಾ ಲೇಡೀಸ್’ ಸಿನಿಮಾದ ಸ್ಪೆಷೆಲ್ ಸ್ಕ್ರೀನಿಂಗ್ ಆಯೋಜನೆ ಮಾಡಲಾಗಿತ್ತು. ಸಿನಿಮಾ ಪ್ರದರ್ಶನ ಆದ ಬಳಿಕ ಪ್ರತಿಕಾಗೋಷ್ಠಿಯನ್ನು ನಡೆಸಲಾಗಿತ್ತು. ಈ ವೇಳೆ ನಿರ್ದೇಶಕಿ ಕಿರಣ್ ರಾವ್ ಅವರಿಗೆ ‘ಲಾಪತಾ ಲೇಡೀಸ್’ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ.
“ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾಕ್ಕೆ ಹೇಗೆ ಪ್ರತಿಕ್ರಿಯೆ ಬರುತ್ತದೆ ಎನ್ನುವುದನ್ನು ನೋಡಬೇಕಿದೆ. ಪ್ರೇಕ್ಷಕರು ಹಾಗೂ ದೇಶ ನಮ್ಮ ಕೆಲಸವನ್ನು ಮೆಚ್ಚಿದರೆ ಅದು ನಮಗೆ ಸಿಗುವ ದೊಡ್ಡ ಗೌರವವಾವಾಗಿದೆ. ಇದನ್ನು ಅನುಸರಿಯೇ ನಾವು ಮುಂದಿನ ವರ್ಷ ಆಸ್ಕರ್‌ಗೆ ಚಿತ್ರವನ್ನು ಸಲ್ಲಿಸಲು ನಾವು ಪರಿಗಣಿಸುತ್ತೇವೆ. ವರ್ಷದ ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಣಯಿಸುವ ಮತ್ತು ಆಯ್ಕೆ ಮಾಡುವ ನಿರ್ದಿಷ್ಟ ಸಮುದಾಯವಿದೆ. ಅಲ್ಲಿ ನಮ್ಮ ಸಿನಿಮಾವನ್ನು ಯೋಗ್ಯವೆಂದು ಪರಿಗಣಿಸಿದರೆ, ನಾವು ಅದನ್ನು ಪ್ರತಿಷ್ಠಿತ ಆಸ್ಕರ್‌ಗೆ ಸಲ್ಲಿಸುತ್ತೇವೆ. ಸದ್ಯಕ್ಕೆ ನಾವು ಮಾರ್ಚ್ 1ರಂದು ಸಿನಿಮಾ ರಿಲೀಸ್ ಆದ ಬಳಿಕೆ ಅದಕ್ಕೆ ಬರುವ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ” ಎಂದು ಕಿರಣ್ ರಾವ್ ಹೇಳಿದ್ದಾರೆ.
‘ಲಾಪತಾ ಲೇಡೀಸ್’ಸಿನಿಮಾದಲ್ಲಿ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ,ಛಾಯಾ ಕದಂ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಿಪ್ಲಬ್ ಗೋಸ್ವಾಮಿಯವರ ಪ್ರಶಸ್ತಿ ವಿಜೇತ ಕಥೆಯನ್ನು ಸಿನಿಮಾ ಆಧರಿಸಿದೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದಾರೆ, ಹೆಚ್ಚುವರಿ ಸಂಭಾಷಣೆಗಳನ್ನು ದಿವ್ಯನಿಧಿ ಶರ್ಮಾ ಬರೆದಿದ್ದಾರೆ.