ಹೊಸದಿಲ್ಲಿ : ಕ್ರೊವೇಶಿಯವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸಿ ಎರಡನೇ ಬಾರಿಗೆ ಫ್ರಾನ್ಸ್ FIFA ವಿಶ್ವ ಕಪ್ ಫುಟ್ಬಾಲ್ 2018ರ ಚಾಂಪ್ಯನ್‌ಶಿಪ್ಪನ್ನು ಗೆದ್ದಿರುವುದರ ಸಂಭ್ರಮೋಲ್ಲಾಸ ಫ್ರಾನ್ಸ್‌ನಲ್ಲಿ ಮಾತ್ರವಲ್ಲದೆ ಜಗತ್ತಿನ ವಿವಿಧೆಡೆಗಳಲ್ಲಿ ಕಂಡು ಬಂದಿದೆ.
ಆಶ್ಚರ್ಯವೆಂದರೆ ಈ ಹಿಂದೆ ಫ್ರೆಂಚರ ವಸಾಹತುವಾಗಿದ್ದು 1962ರಲ್ಲಿ ಭಾರತಕ್ಕೆ ಸೇರಿರುವ ಪುದುಚೇರಿಯ ಜನರು ಕೂಡ ಫ್ರಾನ್ಸ್ ನ ಈ ಮಹಾ ವಿಜಯವನ್ನು ಬೀದಿಗಳಿಗಿದು ಸಂಭ್ರಮಿಸುವ ಮೂಲಕ ಆಚರಿಸಿದ್ದಾರೆ.
ಪದುಚೇರಿ ಜನರ ಈ ಸಂಭ್ರಮೋಲ್ಲಾಸವನ್ನು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಬೆಂಬಲಿಸಿ ಪ್ರೋತ್ಸಾಹಿಸಿ ಟ್ವೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಬೇಡಿ ಅವರ ಟ್ವೀಟ್‌ಗೆ ಅನೇಕರು ಟ್ರೋಲ್ ಮಾಡಿದ್ದಾರೆ.
“ಹಿಂದಿನ ಫ್ರೆಂಚ್ ಕಾಲನಿಯ ಪುದೇಚರಿಗಳಾಗಿರುವ ನಾವು ವಿಶ್ವ ಕಪ್ ಫುಟ್ಬಾಲ್ ಗೆದ್ದಿದ್ದೇವೆ; ಎಲ್ಲ ಸ್ನೇಹಿತರಿಗೂ ಶುಭಾಶಯಗಳು, ಅಭಿನಂದನೆಗಳು. ಫ್ರಾನ್ಸ್ ಎಂತಹ ಒಂದು ಮಿಶ್ರ ತಂಡ; ಅಂತೆಯೇ ಪುದುಚೇರಿಗಳು – 1962ರಲ್ಲಿ ಫ್ರೆಂಚರ ಒಂದು ಸಣ್ಣ ಕಾಲನಿಯಾಗಿದ್ದು ಅನಂತರ ಭಾರತ ಒಕ್ಕೂಟದೊಂದಿಗೆ ಸೇರಿದ ಪುದುಚೇರಿಗಳು ತಮ್ಮ ಅನನ್ಯ ಸಾಂಸ್ಕೃತಿಕ ಸಿರಿವಂಕೆಯನ್ನು ಉಳಿಸಿಕೊಂಡಿದ್ದಾರೆ’ ಎಂದು ಕಿರಣ್ ಬೇಡಿ ಪ್ರಶಂಸಿಸಿದ್ದಾರೆ.
ಕಿರಣ್ ಬೇಡಿ ಅವರ ಈ ಟ್ವೀಟ್‌ಗೆ ಟೀಕೆಗಳು, ಮೆಚ್ಚುಗೆಗಳು ವ್ಯಕ್ತವಾಗಿವೆ. ಪುದುಚೇರಿ ಫ್ರೆಂಚ್ ಕಾಲನಿ ಆಗಿತ್ತೆಂಬುದು ಭಾರತೀಯರಿಗೆ ಹೆಮ್ಮೆಯ ವಿಷಯ ಹೇಗಾದೀತು ಎಂದು ಹಲವರು ಪ್ರಶ್ನಿಸಿದ್ದಾರೆ. ಹಾಗಿದ್ದರೂ ಪದುಚೇರಿಗಳು ತನ್ನ ಫ್ರೆಂಚ್ ಅಸ್ಮಿತೆಯನ್ನು, ಸಾಂಸ್ಕೃತಿಕ ಸಿರಿವಂತಿಕೆಯನ್ನು ಉಳಿಸಿಕೊಂಡಿರುವುದು ಅವರ ಹೃದಯ ವೈಶಾಲ್ಯದ ಪ್ರತೀಕವಾಗಿದೆ; ಜಗತ್ತೇ ಒಂದು ಕುಟುಂಬ ಎಂಬ ಪರಿಕಲ್ಪನೆಗೆ ಪೂರಕವಾಗಿದೆ ಎಂದು ಅನೇಕರು ಪ್ರಶಂಸಿಸಿದ್ದಾರೆ.