Advertisement

2022ಕ್ಕೆ ದೇಶದ 3 ಕಡೆ ಅದಿರು ಉಂಡೆ ಉತ್ಪಾದನೆ

10:21 AM Dec 04, 2018 | Team Udayavani |

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿಯು (ಕೆಐಒಸಿಎಲ್‌) 2022ರ ವೇಳೆಗೆ ದೇಶದ ಮೂರು ಕಡೆಗಳಲ್ಲಿ 60 ಲಕ್ಷ ಟನ್‌ ಕಬ್ಬಿಣದ ಉಂಡೆ ಉತ್ಪಾದನ ಘಟಕಗಳನ್ನು ಪ್ರಾರಂಭಿಸಲಿದೆ ಎಂದು ಕೆಐಒಸಿಎಲ್‌ ಆಡಳಿತ ನಿರ್ದೇಶಕ ಎಂ.ವಿ. ಸುಬ್ಬರಾವ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ವಿಶಾಖಪಟ್ಟಣ, ಒಡಿಶಾದ ಬೊಕಾರೊ ಮತ್ತು ಭಿಲಾಯ್‌ಗಳಲ್ಲಿ ಹೊಸ ಮಾದರಿಯ ಕಬ್ಬಿಣದ ಉಂಡೆ ನಿರ್ಮಿಸುವ ಘಟಕ ಆರಂಭಿಸಲು ನಿರ್ಧರಿಸಲಾಗಿದೆ. ಮೊದಲನೇ ಹಂತವಾಗಿ ಮುಂದಿನ ವರ್ಷ ವಿಶಾಖಪಟ್ಟಣದಲ್ಲಿ ಕೆಐಒಸಿಎಲ್‌ ಮತ್ತು ಆರ್‌ಐಎನ್‌ಎಲ್‌ ಸಹಯೋಗದಲ್ಲಿ ಸುಮಾರು 25 ಎಕರೆ ಜಾಗದಲ್ಲಿ ಘಟಕ ಆರಂಭವಾಗಲಿದೆ. ಯೋಜನಾ ವರದಿ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದರು.
ವರ್ಷದೊಳಗೆ ಆರಂಭ ನಿರೀಕ್ಷೆ

ಮುಂದಿನ ದಿನಗಳಲ್ಲಿ ಒಡಿಶಾದ ಬೊಕಾರೊ ಮತ್ತು ಭಿಲಾಯ್‌ಗಳಲ್ಲಿ ಪ್ರಾರಂಭಿಸಲಾಗುವುದು. ಸದ್ಯ ಒಡಿಶಾದಿಂದ ಅದಿರನ್ನು ಮಂಗಳೂರಿಗೆ ತಂದು ಇಲ್ಲಿ ಉಂಡೆಯಾಗಿಸಿ ವಿಶಾಖಪಟ್ಟಣಕ್ಕೆ ಕಳುಹಿಸಲಾಗುತ್ತಿದೆ. ವರ್ಷದೊಳಗೆ ವಿಶಾಖಪಟ್ಟಣದಲ್ಲಿಯೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ಸಾಗಾಟ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಿದರು.

ಬೊಕಾರೊದಲ್ಲಿ ಕಬ್ಬಿಣದ ಉಂಡೆ ಉತ್ಪಾದನ ಘಟಕ ಸ್ಥಾಪನೆಯ ಒಪ್ಪಂದಕ್ಕೆ ಸದ್ಯದಲ್ಲಿಯೇ ಸಹಿ ಹಾಕಬೇಕಾಗಿದೆ. ಭಿಲಾಯ್‌ನಲ್ಲಿ ಕಟ್ಟಡ ಸಾಮಗ್ರಿ ಹಾಗೂ ಜಾಗವನ್ನು ಎಸ್‌ಎಐಎಲ್‌ ಕಂಪೆನಿ ಒದಗಿಸಲಿದ್ದು, ಘಟಕದ ಅಂದಾಜು ವೆಚ್ಚ ಸಿದ್ಧಪಡಿಸಲಾಗುತ್ತಿದೆ. ಎಲ್ಲ ಮೂರು ಘಟಕಗಳು ತಲಾ 20 ಲಕ್ಷ ಟನ್‌ ಅದಿರನ್ನು ಉಂಡೆ ಕಟ್ಟುವ ಸಾಮರ್ಥ್ಯ ಹೊಂದಿರಲಿವೆ ಎಂದು ವಿವರಿಸಿದರು. 

ಶೇ. 59ರಷ್ಟು  ಹೆಚ್ಚಳ
ಕೆಐಒಸಿಎಲ್‌ 2017-18ನೇ ಸಾಲಿನಲ್ಲಿ 23.27 ಲಕ್ಷ ಟನ್‌ ಕಬ್ಬಿಣದ ಉಂಡೆ ಉತ್ಪಾದನೆ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 59ರಷ್ಟು ಹೆಚ್ಚಳ ಸಾಧಿಸಿದೆ. 86.09 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸಿದ್ದು, 81.48 ಕೋಟಿ ರೂ. ತೆರಿಗೆ ಅನಂತರದ ಲಾಭ ಗಳಿಸಿದೆ. ಅದೇ ರೀತಿ ಈ ವರ್ಷದ ಮೊದಲರ್ಧದಲ್ಲಿ 9.24 ಲಕ್ಷ ಟನ್‌ ಕಬ್ಬಿಣದ ಉಂಡೆ ಉತ್ಪಾದಿಸಿದೆ ಎಂದರು.

Advertisement

ಲಕ್ಯಾ ಅಣೆಕಟ್ಟೆಯಿಂದ ಮಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಅವಕಾಶವಿದ್ದರೂ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಬೇಕಾಗಿದೆ. ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ 100 ಎಕರೆ ಪ್ರದೇಶ ಈಗ ಚಟುವಟಿಕೆ ರಹಿತವಾಗಿದೆ. ಅಲ್ಲಿರುವ ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗಿದ್ದು, ನಿರ್ವಹಣೆಗೆ ಸಿಬಂದಿ ಇದ್ದಾರೆ ಎಂದರು. ಕೆಐಒಸಿಎಲ್‌ ಲಿ., ಪೆಲೆಟ್‌ ಪ್ಲಾಂಟ್‌ ಮಹಾಪ್ರಬಂಧಕ ರಾಕ್‌ ಡಿ’ಸೋಜಾ, ಜಂಟಿ ಮಹಾಪ್ರಬಂಧಕ ಬಿ.ವಿ. ಪ್ರಕಾಶ್‌, ಮಾನವ ಸಂಪದ ಪ್ರಬಂಧಕ ಎಸ್‌. ಮುರುಗೇಶ್‌ ಉಪಸ್ಥಿತರಿದ್ದರು.

ಸಾಮರ್ಥ್ಯ ಹೆಚ್ಚಳ
ಮಂಗಳೂರಿನಲ್ಲಿ ಕೆಐಒಸಿಎಲ್‌ ಸದ್ಯ 35 ಲಕ್ಷ ಟನ್‌ ಅದಿರು ಉಂಡೆ ಕಟ್ಟುವ ಸಾಮರ್ಥ್ಯ ಹೊಂದಿದ್ದು, 25 ಲಕ್ಷ ಟನ್‌ ಉಂಡೆ ಕಟ್ಟಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಸಾಮರ್ಥ್ಯವನ್ನು 50 ಲಕ್ಷ ಟನ್‌ಗೆ ಹೆಚ್ಚಿಸುವ ಗುರಿ ಇದೆ ಎಂದು  ಎಂ.ವಿ. ಸುಬ್ಬರಾವ್‌ ಹೇಳಿದರು.

ಸೋಲಾರ್‌ ವಿದ್ಯುತ್‌
ಕುದುರೆಮುಖವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅವಕಾಶ ಇದೆ. ಆದರೆ ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಕೆಐಒಸಿಎಲ್‌ ಮುಂದಿನ ದಿನಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ 5 ಮೆ.ವ್ಯಾ. ಸೋಲಾರ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ.
 ಎಂ.ವಿ. ಸುಬ್ಬರಾವ್‌,  ಕೆಐಒಸಿಎಲ್‌ ಆಡಳಿತ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next