Advertisement

ಕಿನ್ನಿಗೋಳಿ ಪಟ್ಟಣ ಪಂ. ವ್ಯಾಪ್ತಿ: ಒಳಚರಂಡಿ ತ್ಯಾಜ್ಯ ಹರಿದು ಬಾವಿ ನೀರು ಕುಲುಷಿತ

02:42 PM May 15, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬಿತ್ತುಲ್‌ ಪ್ರದೇಶದಲ್ಲಿ ಕಿನ್ನಿಗೋಳಿ ಪೇಟೆಯ ಒಳಚರಂಡಿ ನೀರು ತೆರೆದ ತೋಡಿನಲ್ಲಿ ಹರಿಯುವ ಕಾರಣ ಕಿನ್ನಿಗೋಳಿಯ ಬಿತ್ತುಲು ಪ್ರದೇಶದ ಹಲವು ಬಾವಿಯ ನೀರು ಹಾಳಾಗಿದ್ದು ಮಾತ್ರವಲ್ಲದೆ ಇಲ್ಲಿನ ಜನತೆಗೆ ರೋಗ ಭೀತಿ ಎದುರಾಗಿದೆ.

Advertisement

ಕಳೆದ 2016- 2017ರಲ್ಲಿ ಕಿನ್ನಿಗೋಳಿ ಬಿತ್ತುಲ್‌ ಪ್ರದೇಶದಲ್ಲಿ ಎಸ್‌ಟಿಪಿ ಪ್ಲಾಂಟ್‌ ನಿರ್ಮಾಣ ವಾಗಿದ್ದು, ಕಿನ್ನಿಗೋಳಿಯ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರನ್ನು ಇದಕ್ಕೆ ಹಾಯಿಸಲಾಗಿ ಪ್ಲಾಂಟ್‌ ನಿಂದ ಹೊರ ಬಂದ ನೀರನ್ನು ಸ್ಥಳೀಯ ತೋಟಗಳಿಗೆ ಬಿಡಲಾಗುತ್ತಿತ್ತು. ಕಾಲ ಕ್ರಮೇಣ ನೀರು ಶುದ್ಧೀಕರಣಗೊಳ್ಳದೆ ನೇರವಾಗಿ ತೋಟಕ್ಕೆ ಹರಿದ ಕಾರಣ ಇಲ್ಲಿನ ವಾಸನೆಯುಕ್ತ ಪರಿಸರ ಮಾತ್ರವಲ್ಲದೆ, ತೆರೆದ ತೋಡಿನಲ್ಲಿ ಹರಿಯುವ ಕಾರಣ ಸ್ಥಳೀಯರ ಕುಡಿಯುವ ನೀರಿನ ಬಾವಿಗೆ ಇಂಗಿ ಅಲ್ಲಿಯ ನೀರು ಹಾಳಾಗಿದೆ. ಈ ಬಗ್ಗೆ ಸ್ಥಳೀಯರು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮತ್ತು ಶಾಸಕ ಉಮಾನಾಥ ಕೋಟ್ಯಾನ್‌ ಅವರಿಗೆ
ದೂರು ನೀಡಿದ್ದರು.

ಕಿನ್ನಿಗೋಳಿ ಬಹು ಮಹಡಿ ಕಟ್ಟಡಗಳಲ್ಲಿ ಎಸ್‌ಟಿಪಿ ಪ್ಲಾಂಟ್‌ ಇದ್ದರೂ ಕೆಲವೊಂದು ಸಲ ಶುದ್ಧೀಕರಿಸದೆ ನೇರವಾಗಿ ನೀರನ್ನು ಹೊರ ಬಿಡುತ್ತಾರೆ ಎಂಬುದು ಸ್ಥಳೀಯರ ಆರೋಪ. ಅಲ್ಲದೆ ಪಂಚಾಯತ್‌ನ ಎಸ್‌ಡಿಪಿ ಪ್ಲಾಂಟ್‌ ಕೂಡ ಕೆಟ್ಟು ಹೋಗಿದ್ದು, ಇದರಿಂದ ನೀರು ನೇರವಾಗಿ ಹೊರ ಬರುತ್ತದೆ ಎನ್ನಲಾಗುತ್ತಿದೆ. ಈ ಘಟಕದ ಪಂಪ್‌ ಕೆಟ್ಟು ಹೋಗಿದ್ದು, ಇತ್ತೀಚೆಗೆ
ಹೊಸ ಪಂಪ್‌ ಅಳವಡಿಸಲಾಗಿದೆ. ಆದರೂ ಈ ಸಮಸ್ಯೆಯನ್ನು ಪರಿಹಾರ ಕಂಡಿಲ್ಲ.

ಆರೋಗ್ಯ ಇಲಾಖೆ ಇತ್ತ ನೋಡಲಿ
ಇಲ್ಲಿ ಪಟ್ಟಣ ಪಂಚಾಯತ್‌ಗೆ ಜನ ಸಾಮಾನ್ಯ ಸಮಸ್ಯೆಗೆ ಬಗ್ಗೆ ಕಾಳಜಿ ಇಲ್ಲ. ಈಗಾಗಲೇ ಹಲವಾರು ಕುಡಿಯವ ನೀರಿನ ಬಾವಿಗಳು ಬಳಕೆಗೆ ಅಯೋಗ್ಯವಾಗಿವೆ. ಬಿತ್ತುಲ್‌ ಪರಿಸರದಲ್ಲಿ ಈಗಾಗಲೇ ಹಲವಾರು ಮಂದಿ ಅಸ್ತಮಾ, ಚರ್ಮ ರೋಗ, ಮಲೇರಿಯಾ ಜ್ವರ, ಆನೆ ಕಾಲು ರೋಗ, ಮುಂದಕ್ಕೆ ಡೆಂಗ್ಯೂ, ಇನ್ನಿತರ ಕಾಯಿಲೆಗಳು ಬರುವುದು ಬಾಕಿ ಜನಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯವರು ಇಲ್ಲಿಗೆ ಒಂದು ಸಲ ಭೇಟಿ ನೀಡಿ ಇಲ್ಲಿನ ಜನರು ಯಾವ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಸ್ಥಳೀಯ ರಾದ ಪ್ರಣಿಕ್‌ ಆಗ್ರಹಿಸಿದ್ದಾರೆ.

ಹೊಸ ಘಟಕಕ್ಕೆ ಜಾಗ ಗುರುತಿಸಲಾಗಿದೆ ಈಗ ಇರುವ ದ್ರವತಾಜ್ಯ ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸದ್ಯಕ್ಕೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಕಿನ್ನಿಗೋಳಿಗೆ ಈ ಘಟಕದ ಸಾಮರ್ಥ್ಯ ಸಾಕಾಗುತ್ತಿಲ್ಲ. ಹೊಸ ಘಟಕ ನಿರ್ಮಿಸಲು ಈ ಪ್ರದೇಶದಲ್ಲಿ 80 ಸೆಂಟ್ಸ್‌ ಜಾಗ ಗುರುತಿಸಲಾಗಿದೆ. ಘಟಕಕ್ಕೆ ಸುಮಾರು 80 ಲಕ್ಷ ರೂ. ವೆಚ್ಚ ತಗುಲಬಹುದು. ಅದಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ನಾಗರಾಜ್‌, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ
ಪಂಚಾಯತ್‌

Advertisement

*ರಘುನಾಥ ಕಾಮತ್‌ ಕೆಂಚನಕರೆ

Advertisement

Udayavani is now on Telegram. Click here to join our channel and stay updated with the latest news.

Next