Advertisement

ಪಂಜಾಬ್‌ ಹಾದಿಗೆ ಮುಳ್ಳಾದೀತೇ ಆರ್‌ಸಿಬಿ?

06:15 AM May 14, 2018 | |

ಇಂದೋರ್‌: ಸುರಂಗದಲ್ಲಿ ಸಾಗುತ್ತಿರುವ ಆರ್‌ಸಿಬಿಗೆ ಬಹಳ ದೂರದಲ್ಲೊಂದು ಬೆಳಕಿನ ಕಿರಣ ಗೋಚರಿಸತೊಡಗಿದ ಅನುಭವವಾಗಿದೆ. ಇದಕ್ಕೆ ಕಾರಣ, ಡೆಲ್ಲಿ ವಿರುದ್ಧ ಸಾಧಿಸಿದ ಗೆಲುವು. ಸೋಮವಾರ ಇಂದೋರ್‌ನಲ್ಲಿ ಪಂಜಾಬ್‌ಗ ಪಂಚ್‌ ಕೊಟ್ಟರೆ ಕೊಹ್ಲಿ ಪಡೆಯ ಪ್ಲೇ-ಆಫ್ ಬೆಳಕು ಇನ್ನಷ್ಟು ಪ್ರಖರವಾಗಲಿದೆ. ಹಾಗೆಯೇ ಪಂಜಾಬ್‌ ಎದೆಬಡಿತವೂ ಜಾಸ್ತಿಯಾಗಲಿದೆ.

Advertisement

ಅನುಮಾನವೇ ಇಲ್ಲ, ಆರ್‌ಸಿಬಿ ಮುಂದಿನ ಸುತ್ತು ತಲುಪಬೇಕಾದರೆ ಪವಾಡವೇ ಸಂಭವಿಸಬೇಕು. ಕೊಹ್ಲಿ ಪಡೆ 4 ಜಯದೊಂದಿಗೆ ಇನ್ನೂ 7ನೇ ಸ್ಥಾನದಲ್ಲೇ ಇದೆ. ಆದರೆ ಪಂಜಾಬ್‌ ಸ್ಥಿತಿ ಇದಕ್ಕಿಂತ ಭಿನ್ನ. 6 ಜಯದೊಂದಿಗೆ 3ನೇ ಸ್ಥಾನ ಅಲಂಕರಿಸಿದೆ. ಆದರೆ ಕಳೆದೆರಡು ಪಂದ್ಯಗಳನ್ನು ಸೋತದ್ದು ಅಶ್ವಿ‌ನ್‌ ಪಡೆಯ ಆತಂಕವನ್ನು ಹೆಚ್ಚಿಸಿದೆ. ಈ ಸೋಲಿನ ಸರಪಳಿ ಮುಂದುವರಿದರೆ… ಎಂಬ ಚಿಂತೆ ಆವರಿಸಿದೆ. ಆಗ 2 ಪ್ಲೇ-ಆಫ್ ಸ್ಥಾನಗಳಿಗಾಗಿ ನಾಲ್ಕರ ಬದಲು 5 ತಂಡಗಳ ಸ್ಪರ್ಧೆಯನ್ನು ನಿರೀಕ್ಷಿಸಬೇಕೋ ಏನೋ!

ಅನಿರೀಕ್ಷಿತ, ಅಚ್ಚರಿ ಸಂಭವಿಸಿದರೆ?
ಪಂಜಾಬ್‌ ಪಾಲಿಗೆ ಇದು ಗೆಲ್ಲಲೇಬೇಕಾದ ಪಂದ್ಯ. ಇನ್ನೂ 4 ಪಂದ್ಯ ಬಾಕಿ ಇದ್ದು, ಎರಡನ್ನು ಗೆದ್ದರೆ ಸಾಕು ಎಂಬುದು ಪಂಜಾಬ್‌ ಲೆಕ್ಕಾಚಾರ. ಆದರೆ ಇದು ಉಲ್ಟಾ ಹೊಡೆದರೆ? ಲೀಗ್‌ ಹಂತ ಕೊನೆಗೊಳ್ಳುತ್ತಿರುವಂತೆಯೇ ಐಪಿಎಲ್‌ನಲ್ಲಿ ಅಚ್ಚರಿ, ಅನಿರೀಕ್ಷಿತಗಳು ಸಂಭವಿಸುವುದು ಜಾಸ್ತಿ!

ಶನಿವಾರ ಇದೇ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ 245 ರನ್‌ ಪೇರಿಸಿ ಪಂಜಾಬ್‌ಗ ಆಘಾತವಿಕ್ಕಿತ್ತು. ಇದಕ್ಕೂ ಮುನ್ನ ರಾಜಸ್ಥಾನ್‌ ವಿರುದ್ಧ ಜೈಪುರದಲ್ಲಿ ಅಶ್ವಿ‌ನ್‌ ಪಡೆ 159 ರನ್‌ ಗುರಿ ಮುಟ್ಟಲಾಗದೆ ಪರಿತಪಿಸಿತ್ತು. ಬಹಳ ಬೇಗ ಪ್ಲೇ-ಆಫ್ ಮುಟ್ಟುವ ಕನಸು ಕಾಣುತ್ತಿದ್ದ ಪಂಜಾಬ್‌ ಹಾದಿಗೆ ಈ 2 ಸೋಲುಗಳು ಮುಳ್ಳಾಗಿ ಪರಿಣಮಿಸಿದ್ದು ಸುಳ್ಳಲ್ಲ.

ಪಂಜಾಬ್‌ ಬ್ಯಾಟಿಂಗ್‌ ಸರದಿ ಈಗ ಕೆ.ಎಲ್‌. ರಾಹುಲ್‌ ಅವರನ್ನೇ ಬಹಳಷ್ಟು ಅವಲಂಬಿಸಿದೆ. ಆರಂಭದಲ್ಲಿ ಮೆರೆದ ಕ್ರಿಸ್‌ ಗೇಲ್‌ ಈಗ ತುಸು ಮಂಕಾಗಿದ್ದಾರೆ. ಅಗರ್ವಾಲ್‌, ನಾಯರ್‌, ಫಿಂಚ್‌ ಅಗತ್ಯ ಸಂದರ್ಭಗಳಲ್ಲೇ ಕೈಕೊಡುತ್ತಿದ್ದಾರೆ. ಪಂಜಾಬ್‌ ಬೌಲರ್‌ಗಳ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬುದನ್ನು ಮೊನ್ನೆ ಕೋಲ್ಕತಾ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ತೋರಿಸಿ ಕೊಟ್ಟಿದ್ದಾರೆ. ಇದನ್ನೆಲ್ಲ ಮೀರಿ ಗೆಲುವಿನ ಹಾದಿಗೆ ಮರಳುವುದು ಪಂಜಾಬ್‌ ಪಾಲಿನ ತುರ್ತು ಅಗತ್ಯ.

Advertisement

ಸೇಡು ತೀರಿಸುವ ಒತ್ತಡ
ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗು ಹೊಮ್ಮಿಸಿತ್ತು. ಕನ್ನಡಿಗರೇ ತುಂಬಿದ ಪಂಜಾಬನ್ನು “ಚಿನ್ನಸ್ವಾಮಿ’ಯಲ್ಲಿ 155 ರನ್ನಿಗೆ ಆಲೌಟ್‌ ಮಾಡಿದ್ದು ರಾಯಲ್‌ ಚಾಲೆಂಜರ್ ತಂಡದ ಹೆಚ್ಚುಗಾರಿಕೆಯಾಗಿತ್ತು. ಜವಾಬಿತ್ತ ಆರ್‌ಸಿಬಿ ಡಿ ಕಾಕ್‌ (45), ಎಬಿಡಿ (57) ಸಾಹಸದಿಂದ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸುವ ಒತ್ತಡವೂ ಪಂಜಾಬ್‌ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next