ದುಬಾೖ: ಸತತ ಎರಡು ಪಂದ್ಯಗಳನ್ನು ಗೆದ್ದು ಹಳಿ ಏರುವ ಸೂಚನೆ ನೀಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮಂಗಳವಾರ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಎರಡೂ ತಂಡಗಳಿಗೆ ಇದು ತಿರುವು ನೀಡುವ ಪಂದ್ಯ. ಡೆಲ್ಲಿ ಗೆದ್ದರೆ ಮುಂದಿನ ಸುತ್ತು ಬಹುತೇಕ ಖಚಿತಗೊಳ್ಳಲಿದೆ. ಪಂಜಾಬ್ ಜಯಿಸಿದರೆ ಸ್ಪರ್ಧೆಯಲ್ಲಿ ಉಳಿಯಲಿದೆ.
ಪಂಜಾಬ್ ಕಾಗದದಲ್ಲಿ ಬಲಿಷ್ಠ ತಂಡ. ಸಾಲು ಸಾಲು ಸ್ಟಾರ್ ಆಟಗಾರರನ್ನು ಕಾಣಬಹುದು. ಆದರೆ ಕೆ.ಎಲ್.ರಾಹುಲ್ (525 ರನ್) ಮತ್ತು ಮಾಯಾಂಕ್ ಅಗರ್ವಾಲ್ (393 ರನ್) ಹೊರತುಪಡಿಸಿ ಉಳಿದವರಿಂದ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ಕಂಡುಬಂದಿಲ್ಲ. ಮ್ಯಾಕ್ಸ್‌ವೆಲ್ ಅವರಂತೂ ಬ್ಯಾಟಿಂಗನ್ನೇ ಮರೆತಂತಿದೆ. ನಿಕೋಲಸ್ ಪೂರನ್ ಆಗಾಗ ಸಿಡಿದರೂ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿಲ್ಲ. “ಲೇಟ್ ಕಮರ್’ ಗೇಲ್ ಅವರಿಂದ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ. ಮುಂಬೈ ವಿರುದ್ಧ ಸೂಪರ್ ಓವರ್ ನಲ್ಲಿ ಒಲಿದ ಜಯ ಪಂಜಾಬ್ ತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಇದನ್ನೂ ಓದಿ:ಧೋನಿ ಆಯ್ತು, ಈಗ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ!
ಮೊದಲ ಸುತ್ತಿನಲ್ಲಿ ಪಂಜಾಬ್-ಡೆಲ್ಲಿ ತಂಡಗಳು ಟೈ ಪಂದ್ಯಕ್ಕೆ ಸಾಕ್ಷಿಯಾಗಿದ್ದವು. ಎರಡೂ ತಂಡಗಳು 157 ರನ್ ಗಳಿಸಿದ ಬಳಿಕ ಡೆಲ್ಲಿ ಸೂಪರ್ ಓವರ್‌ನಲ್ಲಿ ಜಯಿಸಿತ್ತು. “ಸೈಲೆಂಟ್ ಕಿಲ್ಲರ್’ ಡೆಲ್ಲಿ ಅಗ್ರ ಕ್ರಮಾಂಕದಲ್ಲಿ ವೈಫಲ್ಯ ಕಾಣುತ್ತಿದೆ. ಪೃಥ್ವಿ ಶಾ ಪರಿಣಾಮ ಬೀರುತ್ತಿಲ್ಲ. ಆದರೆ ಶಿಖರ್ ಧವನ್ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಬ್ಯಾಟಿಂಗ್ ಲಯಕ್ಕೆ ಮರಳಿದ್ದು ಶುಭ ಸಮಾಚಾರ.