Advertisement

ಎನ್‌ಐಎ ಬಲೆಯಲ್ಲಿ ಖೋಟಾನೋಟು ಸರಬರಾಜು ಕಿಂಗ್‌ಪಿನ್‌

11:52 AM Oct 30, 2018 | Team Udayavani |

ಬೆಂಗಳೂರು: ಇಂಡೋ- ಬಾಂಗ್ಲಾ ಗಡಿಯ ಮೂಲಕ ಖೋಟಾನೋಟು ತರಿಸಿಕೊಂಡು ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಿಂಗ್‌ ಪಿನ್‌ ಶುಕ್ರುದ್ದೀನ್‌ ಶೇಖ್‌ ಅಲಿಯಾಸ್‌ ಶುಕ್ರುದ್ದೀನ್‌ ಅನ್ಸಾರಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಆರೋಪಿ ಶುಕ್ರುದ್ದೀನ್‌ನನ್ನು ಮಾಲ್ಡಾದ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ. ನ. 1ರಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಜತೆಗೆ, ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಸಲುವಾಗಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಕಳೆದ ಮಾರ್ಚ್‌ನಲ್ಲಿ ಚಿಕ್ಕೋಡಿ ಅಶೋಕ್‌ ಕಂಬಾರ್‌ ಸೇರಿದಂತೆ ಇನ್ನಿತರರನ್ನು ಬಂಧಿಸಿದ ಖೋಟಾನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದ ಎನ್‌ಐಎ ಅಧಿಕಾರಿಗಳು ಇದೀಗ, ಪ್ರಕರಣದ ನಾಲ್ಕನೇ ಆರೋಪಿ ಎಂದು ಪರಿಗಣಿಸಿರುವ ಶುಕ್ರುದ್ದೀನ್‌ ಶೇಖ್‌ನನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಬಾಗಲಕೋಟೆಯ ಗಂಗಾಧರ ಕೋಲ್ಕರ ಎಂಬಾತನ ಬಂಧಿಸಿದ್ದರು. 

ಖೋಟಾನೋಟು ಚಲಾವಣೆ ಸಂಬಂಧ ಮಾ. 12ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದಲೀಮ್‌ ಮಿಯಾನನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು, ಆತ ನೀಡಿದ ಚಿಕ್ಕೋಡಿಯ ಅಶೋಕ್‌ ಕುಂಬಾರ್‌ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 2000 ಮುಖಬೆಲೆಯ 82 ಸಾವಿರ ರೂ. ಖೋಟಾ ನೋಟುಗಳು ಪತ್ತೆಯಾಗಿದ್ದವು. ಅದೇ ರೀತಿ ರಾಯಭಾಗದ ರಾಜೇಂದ್ರ ಪಾಟೀಲ್‌ರನ್ನು ಬಂಧಿಸಿದ್ದರು.

3.50 ಲಕ್ಷ ಖೋಟಾ ನೋಟು: ರಾಜ್ಯದಲ್ಲಿ ಖೋಟಾನೋಟು ಚಲಾವಣೆ ದಂಧೆಯಲ್ಲಿ ಪ್ರಮುಖ ಆರೋಪಿಗಳು ಎಂದು ಪರಿಗಣಿಸಲಾಗಿರುವ ಚಿಕ್ಕೋಡಿಯ ಅಶೋಕ್‌ ಕುಂಬಾರ್‌ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಶುಕ್ರುದ್ದೀನ್‌, ಮಾಲ್ಡಾದಿಂದ ಖೋಟಾನೋಟು ಸರಬರಾಜು ಮಾಡುತ್ತಿದ್ದ.

Advertisement

ಇದೇ ವರ್ಷ ಮಾರ್ಚ್‌ 6ರಂದು ನ್ಯೂ ಫ‌ರಕ್ಕಾ ರೈಲ್ವೆ ನಿಲ್ದಾಣದಲ್ಲಿ 3.50 ಲಕ್ಷ ರೂ. ಖೋಟಾನೋಟುಗಳನ್ನು ಸದ್ಯ ಜೈಲಿನಲ್ಲಿರುವ ದಲೀಮ್‌ ಮಿಯಾನ ಕೈಯಲ್ಲಿ ಕೊಟ್ಟು ಕಳುಹಿಸಿದ್ದ. ಇದನ್ನು ತೆಗೆದುಕೊಂಡು ಗುಹಾವಟಿ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ದಲೀಮ್‌ ಮಿಯಾ, ಮಾ. 8ರಂದು ಮೆಜೆಸ್ಟಿಕ್‌ನ ಸಮೀಪದ ಚಿತ್ರಮಂದಿರದ ಸಮೀಪ ಅಶೋಕ್‌ ಕುಂಬಾರ್‌ಗೆ ತಲುಪಿಸಿದ್ದ.

ಬಾಂಗ್ಲಾದಿಂದ ರಾಜ್ಯಕ್ಕೆ ಖೋಟಾನೋಟು ಸರಬರಾಜು ಮಾಹಿತಿ ಮೇರೆಗೆ ಎನ್‌ಐಎ ಮುಂಬೈ ಘಟಕದ ಅಧಿಕಾರಿಗಳು, ಮಾ. 12ರಂದು ನಿಪ್ಪಾಣಿ ಬಸ್‌ ನಿಲ್ದಾಣದಲ್ಲಿ ದಲೀಮ್‌ ಮಿಯಾನನ್ನು ಬಂಧಿಸಿದ್ದರು. ಬಳಿಕ, ಆತ ನೀಡಿದ ಮಾಹಿತಿ ಮೇರೆಗೆ ಅಶೋಕ್‌ ಕಂಬಾರ್‌ನನ್ನು ಬಂಧಿಸಿ 82 ಸಾವಿರ ರೂ. ಮೌಲ್ಯದ ಖೋಟಾನೋಟು ವಶಕ್ಕೆ ಪಡೆದಿದ್ದರು. ಮತ್ತೂಬ್ಬ ಆರೋಪಿ ರಾಜೇಂದ್ರ ಪಾಟೀಲ್‌ ಎಂಬಾತನನ್ನು ಬಂಧಿಸಿದ್ದರು.

ತಲೆಮರೆಸಿಕೊಂಡಿರುವ ಇಬ್ಬರು: ಖೋಟಾನೋಟು ಚಲಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂದು ಪರಿಗಣಿಸಲಾಗಿರುವ ಪಶ್ಚಿಮ ಬಂಗಾಳ ಮಾಲ್ಡಾ ಜಿಲ್ಲೆಯ ಶಹನೋಯಾಜ್‌ ಕಸೂರಿ ಹಾಗೂ ಶರೀಫ‌ುಲ್ಲಾ ಇಸ್ಲಾಂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಎನ್‌ಐಎ ಕಾರ್ಯಾಚರಣೆ ನಡೆಸುತ್ತಿದೆ.

ಜೈಲಿನಲ್ಲಿ ಆರೋಪಿಗಳು: ಪ್ರಕರಣದ ಆರೋಪಿಗಳಾದ ದಲೀಮ್‌ ಮಿಯಾ, ಅಶೋಕ್‌ ಕುಂಬಾರ್‌, ರಾಜೇಂದ್ರ ಪಾಟೀಲ್‌, ಗಂಗಾಧರ ಕೋಲ್ಕರ, ಶಹನೋಯಾಜ್‌ ಕಸೂರಿ, ಸೈಫ‌ುಲ್ಲಾ ಇಸ್ಲಾಂ, ಶುಕ್ರುದ್ದೀನ್‌ ಶೇಖ್‌ ವಿರುದ್ಧದ ದೋಷಾರೋಪ ಪಟ್ಟಿಯನ್ನು ಜೂನ್‌ 8ರಂದು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next