Advertisement

ಖೋಟಾನೋಟು ಸರಬರಾಜು ಕಿಂಗ್‌ಪಿನ್‌ ಬಂಧನ

01:22 AM May 25, 2019 | Lakshmi GovindaRaj |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಖೋಟಾನೋಟು ಸರಬರಾಜು ಮಾಡುತ್ತಿದ್ದ ಕಿಂಗ್‌ಪಿನ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ತಜ್ಮುಲ್‌ ಎಸ್‌.ಕೆ (28) ಬಂಧಿತ ಆರೋಪಿ.

Advertisement

2018ರ ಮಾರ್ಚ್‌ನಲ್ಲಿ ವಿಶಾಖ ಪಟ್ಟಣ ರೈಲು ನಿಲ್ದಾಣದಲ್ಲಿ ಕೇಂದ್ರ ಕಂದಾಯ ನಿರ್ದೇಶನಾಲಯದ ಗುಪ್ತಚರ ದಳ (ಡಿಆರ್‌ಐ), ಮಂಡ್ಯ ಜಿಲ್ಲೆ ಮದ್ದೂರಿನ ಮೆಹಬೂಬ್‌ ಬೇಗ್‌ ಅಲಿಯಾಸ್‌ ಅಜರ್‌ ಬೇಗ್‌, ಸೈಯದ್‌ ಇಮ್ರಾನ್‌ ಎಂಬವರನ್ನು ಬಂಧಿಸಿ, 2000 ರೂ. ಮುಖಬೆಲೆಯ 10.20 ಲಕ್ಷ ರೂ. ಮೌಲ್ಯದ ಖೋಟಾನೋಟು ಜಪ್ತಿ ಮಾಡಿಕೊಂಡ ಪ್ರಕರಣದ ಪ್ರಮುಖ ಆರೋಪಿ ತಜ್ಮುಲ್‌ ಆಗಿದ್ದ. ಕಳೆದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ತಜ್ಮುಲ್‌ನನ್ನು ಬಿಹಾರದ ಸಗೌಲಿಯಲ್ಲಿ ಬಂಧಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದಲ್ಲಿ ಮುದ್ರಣವಾಗುತ್ತಿದ್ದ ಅಪಾರ ಪ್ರಮಾಣದ ಖೋಟಾ ನೋಟುಗಳನ್ನು ತರಿಸಿಕೊಳ್ಳುತ್ತಿದ್ದ ಆರೋಪಿ ತಜ್ಮುಲ್‌, ತನ್ನ ಸಹಚರರ ಮೂಲಕ ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ವ್ಯವಸ್ಥಿತವಾಗಿ ಸರಬರಾಜು ಮಾಡುತ್ತಿದ್ದ. ಪಶ್ಚಿಮ ಬಂಗಾಳದ ಮಾಲ್ಡಾದಿಂದ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು. ಕರ್ನಾಟಕ ಸೇರಿದಂತೆ ಹಲವೆಡೆ ಏಜೆಂಟರನ್ನು ಇಟ್ಟುಕೊಂಡು ಕಮಿಷನ್‌ ನೀಡಿ, ಜಾಲದ ಸದಸ್ಯರು ಖೋಟಾನೋಟು ಚಲಾವಣೆ ನಡೆಸುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಆರೋಪಿ ತಜ್ಮುಲ್‌ ಹಾಗೂ ಖೋಟಾನೋಟು ಚಲಾವಣೆ ಆರೋಪ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೂ ಸಂಪರ್ಕವಿರುವ ಸಾಧ್ಯತೆಯಿದೆ. ಜತೆಗೆ ಆರೋಪಿ ಜತೆಗೆ ಇನ್ನೂ ಸಂಪರ್ಕದಲ್ಲಿರುವವರ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಶಾಖ ಪಟ್ಟಣ ರೈಲು ನಿಲ್ದಾಣದಲ್ಲಿ ಹೈದರಾಬಾದ್‌ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ, ಮದ್ದೂರಿನ ಮೆಹಬೂಬ್‌ ಬೇಗ್‌ ಅಲಿಯಾಸ್‌ ಅಜರ್‌ ಬೇಗ್‌ ಮತ್ತು ಸೈಯದ್‌ ಇಮ್ರಾನ್‌ ವಿರುದ್ಧ ಅಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

Advertisement

ದಂಧೆಗೆ ರಾಜಧಾನಿಯೇ ಅಡ್ಡಾ: ಪಶ್ಚಿಮ ಬಂಗಳಾದ ಮಾಲ್ಡಾದ ಕಿಂಗ್‌ಪಿನ್‌ಗಳಿಂದ ಸರಬರಾಜಾಗುವ ಭಾರೀ ಪ್ರಮಾಣದ ಖೋಟಾ ನೋಟುಗಳು ಏಜೆಂಟ್‌ರ ಕೈ ಸೇರುವುದು ಬೆಂಗಳೂರಿನಲ್ಲೇ ಎಂಬುದು ಎನ್‌ಎಐ ತನಿಖೆಯಲ್ಲಿ ಬಯಲಾಗಿದೆ. ನೋಟು ಅಮಾನ್ಯದ ಬಳಿಕ ರಾಜ್ಯದಲ್ಲಿ ದಾಖಲಾದ ಎರಡು ಪ್ರತ್ಯೇಕ ಖೋಟಾ ನೋಟು ಚಲಾವಣೆ ಪ್ರಕರಣಗಳ ಜಾಡು ಹಿಡಿದಿದ್ದ ಎನ್‌ಐಎ ನಡೆಸಿದ ತನಿಖೆಯಲ್ಲಿ ಈ ಅಂಶ ಬಯಲಾಗಿತ್ತು.

ಮಾಲ್ಡಾದಿಂದ ರೈಲು ಮೂಲಕ ಖೋಟಾ ನೋಟುಗಳನ್ನು ತರುತ್ತಿದ್ದ ದಂಧೆಕೋರರು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಏಜೆಂಟರಿಗೆ ತಲುಪಿಸುತ್ತಿದ್ದರು. ಆ ಏಜೆಂಟ್‌ಗಳು ಹುಬ್ಬಳ್ಳಿ, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಚಲಾವಣೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

2018ರ ಮಾರ್ಚ್‌ 12ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದಲೀಮ್‌ ಮಿಯಾನನ್ನು ವಶಕ್ಕೆ ಪಡೆದಿದ್ದ ಮುಂಬೈ ಎನ್‌ಐಎ ಅಧಿಕಾರಿಗಳು, ಆತ ನೀಡಿದ ಮಾಹಿತಿ ಮೇರೆಗೆ 2000 ರೂ. ಮುಖಬೆಲೆಯ 82 ಸಾವಿರ ರೂ. ಖೋಟಾ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದರು. ಬಳಿಕ ದಂಧೆಕೋರರಾದ ಗಂಗಾಧರ ಕೋಲ್ಕರ, ಶುಕ್ರುದ್ದೀನ್‌ ಶೇಖ್‌ ಸೇರಿ ಮತ್ತಿತರರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಇದಲ್ಲದೆ ಮತ್ತೂಂದು ಪ್ರತ್ಯೇಕ ಪ್ರಕರಣದಲ್ಲಿ ಮಾದನಾಯಕಹಳ್ಳಿ ನಿವಾಸದ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಎಂ.ಜಿ.ರಾಜು, ಓರ್ವ ಮಹಿಳೆ ಸೇರಿದಂತೆ ಇನ್ನಿತರ ಆರೋಪಿಗಳನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next