Advertisement

ನಾಗರಹಾವನ್ನು ಬೆನ್ನಟ್ಟಿ ನುಂಗಿದ ಕಾಳಿಂಗ!

05:19 PM Feb 14, 2017 | |

ಹೊಸನಗರ: ನಾಗರಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಬೆದರಿ ಹುತ್ತ ಸೇರುತ್ತಿದ್ದರೂ ಬಿಡದೇ ನಾಗರಹಾವನ್ನು ಹೊರಗೆಳೆದು ಸಂಪೂರ್ಣ ನುಂಗಿದ ಅಪರೂಪದ ದೃಶ್ಯಕ್ಕೆ ಮುಂಡಳ್ಳಿ ಗ್ರಾಮ ಸಾಕ್ಷಿಯಾಯಿತು. ಹೌದು, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮುಂಡಳ್ಳಿ ಗ್ರಾಮದಲ್ಲಿ ರವಿವಾರ ಸಂಜೆ ಈ ಅಪರೂಪದ ಘಟನೆ ನಡೆದಿದೆ. ಬೆನ್ನಟ್ಟಿ ಬಂದ ಕಾಳಿಂಗ ಸರ್ಪಕ್ಕೆ ಬೆದರಿ ಹುತ್ತ ಸೇರಿಕೊಂಡಿತ್ತು ನಾಗರಹಾವು.

Advertisement

ಆದರೂ ಬಿಡದ ಕಾಳಿಂಗ ಹುತ್ತದೊಳಕ್ಕೆ ಹೊಕ್ಕು ನಾಗರಹಾವನ್ನು ಹೊರಗೆಳೆದು ನುಂಗಲು ಆರಂಭಿಸಿತು. ಸುತ್ತಮುತ್ತಲು ಜನ ಸೇರಿದ್ದರೂ ಕೂಡ ಅದ್ಯಾವುದನ್ನು ಲೆಕ್ಕಿಸದ ಕಾಳಿಂಗ ಕೇವಲ 10 ನಿಮಿಷದಲ್ಲಿ ನಾಗರಹಾವು ನುಂಗಿ ಹಾಕಿತ್ತು. ಹಾವೆಂದರೇ ಭಯ ಬೀಳುವ ಮಂದಿ ಈ ಅಪರೂಪದ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸಿದರು. 

ಸುದ್ದಿ ಮುಟ್ಟಿಸಿದರು: ಮುಂಡಳ್ಳಿ ಗ್ರಾಮದ ಮನೆಗಳ ಪಕ್ಕದಲ್ಲಿ ನಾಗರಹಾವನ್ನು ಕಾಳಿಂಗ ಸರ್ಪವೊಂದು ಬೆನ್ನಟ್ಟಿ ಬೇಟೆಯಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಗುಂಬೆಯ ಮಳೆಕಾಡು ಉರಗ ತಜ್ಞ ಅಜಯಗಿರಿಗೆ ಸುದ್ದಿ ಮುಟ್ಟಿಸಿದರು. ಆದರೆ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಕಾಳಿಂಗ ಅರ್ಧದಷ್ಟು ಹಾವನ್ನು ನುಂಗಿ ಆಗಿತ್ತು. ಕಾಳಿಂಗ ಸರ್ಪ ಹಾವನ್ನು ಸಂಪೂರ್ಣ ನುಂಗಿದ ಮೇಲೆ ಕಾಳಿಂಗನನ್ನು ಸೆರೆ ಹಿಡಿದು ಸಮೀಪದ ಕಾಡಿಗೆ ಬಿಟ್ಟರು. 

ಅಪರೂಪದ ದೃಶ್ಯ: ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಕಾಳಿಂಗ ಸರ್ಪ ನಾಗರಹಾವನ್ನು ನುಂಗುವ ದೃಶ್ಯ ಕಂಡು ಬಂದಿದ್ದು ಮಾತ್ರ ಅಪರೂಪ. ಮುಂಡಳ್ಳಿಯ ಬಯಲು ಪ್ರದೇಶದಲ್ಲೇ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ನಾಗರಹಾವು ನುಂಗುವ ವೇದಿಕೆ ಮಾಡಿಕೊಂಡಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರ ಕಣ್ಣಲ್ಲಿ ಆ ಅಪರೂಪದ ದೃಶ್ಯ ಸೆರೆಯಾಯಿತು. 

ಆತಂಕ ಮತ್ತು ಜಾಗೃತಿ: ನಾಗರಹಾವು ನುಂಗುವ ದೃಶ್ಯ ನೋಡಿದ ಸ್ಥಳೀಯರು ಆತಂಕಕ್ಕೋಲಗಾದರು. ನಾಗರಹಾವಿನ ದೋಷ, ಸಂಸ್ಕಾರ ಹೀಗೆ ಗ್ರಾಮಸ್ಥರ ತಲೆಯೊಳಗೆ ಆತಂಕಕ್ಕೂ ಕಾರಣವಾಗಿತ್ತು. ಆದರೆ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ನೀಡಿದ ಅಜಯಗಿರಿ, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ದೊಡ್ಡ ಹಾವು ಸಣ್ಣ ಹಾವನ್ನು ನುಂಗುವುದು ಪ್ರಕೃತಿ ನಿಯಮ. ಅಲ್ಲದೆ ನಾಗರಹಾವೇ ಕಾಳಿಂಗ  ಸರ್ಪದ ಆಹಾರ ಎಂದು ಭಯ ಹೋಗಲಾಡಿಸುವ ಪ್ರಯತ್ನ ಮಾಡಿದರು.

Advertisement

ಅಲ್ಲದೆ ಕಾಳಿಂಗ ಸರ್ಪ ಕಾಣಿಸಿಕೊಂಡ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಪಾಪ ಪುಣ್ಯವೋ.. ಕಾಳಿಂಗ ಸರ್ಪವೊಂದು ನಾಗರಹಾವು ಸಂಪೂರ್ಣ ಭಕ್ಷಿಸುವ ಕುತೂಹಲಕಾರಿ ಅಪರೂಪದ ದೃಶ್ಯ ಕ್ಯಾಮೆರಾ ಕಣ್ಣು ಮಾತ್ರವಲ್ಲದೆ, ಸ್ಥಳೀಯ ಗ್ರಾಮಸ್ಥರ ಕಣ್ಣಲ್ಲೂ ಸೆರೆಯಾಗಿದ್ದು ಮಾತ್ರ ಸುಳ್ಳಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next