Advertisement
ಕಂಚಿಬೈಲು ಕಿಂಡಿ ಅಣೆಕಟ್ಟು ಇರುವುದು ಪುತ್ತಿಗೆ ಗ್ರಾಮದಲ್ಲಿ. ಹಾಗೆಂದು ಇದು ಬರೇ ಪುತ್ತಿಗೆಯ ಜೀವ ಗುಂಡಿ ಅಲ್ಲ; ಪುತ್ತಿಗೆಯೊಂದಿಗೆ ಕಲ್ಲಮುಂಡ್ಕೂರು, ಪಾಲಡ್ಕ, ಕಡಂದಲೆಯತ್ತಲೂ ಜಲ ನಿಧಿ ಪಾಲಾಗಿ ಹೋಗುವ ತಾಣ.
ಈ ಹೂಳು ತುಂಬಿದ ಜಲ ಆಶಯದ ಜಾಗದ ನಡುವೆ ಎರುಗುಂಡಿ ಎಂಬುದಿದೆ. ಎರಡು ಕೋಣಗಳು ಇಲ್ಲಿ ಮಾಯಕವಾಗಿ, ಕಲ್ಲಾಗಿ ಬಿದ್ದಿರುವ “ಜಾನಪದ ಕತೆ’ಯ ಕುರುಹಾಗಿ ಕೋಣಗಳ ಗಾತ್ರದ ಎರಡು ಶಿಲಾಬಂಡೆಗಳಿವೆ. ಸದ್ಯ ಈ ಕೋಣಗಳ ಬೆನ್ನು , ಒಂದಿಷ್ಟು ಪೃಷ್ಠಭಾಗವಷ್ಟೇ ಗೋಚರಿಸುತ್ತಿದೆ. ನಿಜಕ್ಕಾದರೆ ಹೂಳು ತುಂಬಿದ ಜಾಗದಲ್ಲಿ ಕನಿಷ್ಟ ಐದಾರು ಆಳುಗಳಷ್ಟು ಆಳ ನೀರು ಇಲ್ಲಿತ್ತಂತೆ. ಅದು ಹೋಗಲಿ ಕನಿಷ್ಠ 10-15 ಅಡಿಗಳಷ್ಟು ಆಳದವರೆಗಾದರೂ ಹೂಳು ತೆಗೆದರೆ ಇಲ್ಲೊಂದು ಬೃಹತ್ತಾದ ಜಲನಿಧಿಯ ಕೆರೆ ಮೈದಳೆಯುವುದರಲ್ಲಿ ಯಾವುದೇ ಸಂದೇಹ ಬೇಡ. ವೆಚ್ಚವಿಲ್ಲದ ಯೋಜನೆ
ಕೆರೆಗಳಲ್ಲಿ ತುಂಬಿರುವ ಹೂಳೆತ್ತುವುದೆಂದರೆ ಮತ್ತದೇ ಕಾಸು ನುಂಗುವ ಯೋಜನೆಯಾಗದೇ ಎಂಬ ಸಂಶಯ ಮತ್ತು ಅದಕ್ಕೆಲ್ಲ ಆರ್ಥಿಕ ಮಂಜೂರಾತಿ ಹೇಗೆ ಸಾಧ್ಯ ಎಂಬೆಲ್ಲ ಪ್ರಶ್ನೆಗಳು ಕಾಡುವುದು ಸಹಜ.
Related Articles
Advertisement
ಪುತ್ತಿಗೆಯಲ್ಲೂ ಅಷ್ಟೇಕಂಚಿಬೈಲಿನ ಹೂಳೆತ್ತಲು ಪಂಚಾಯತ್ ಸರಕಾರದ ಮುಂದೆ ಕೈ ಚಾಚಬೇಕಾದ ಅಗ ತ್ಯ ವಿ ಲ್ಲ. ಪಂಚಾಯತ್ ಈ ಬಗ್ಗೆ ಸಾರ್ವಜನಿಕ ಸಭೆ ಕರೆದು ಜನರಿಗೆ ವಿಶೇಷವಾಗಿ ಕೃಷಿಕರಿಗೆ ಈ ಹೂಳೆತ್ತುವ ಯೋಜನೆಯನ್ನು ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಕಾರ್ಯಗತ ಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕು. ತೋಟದವರು ಮಾತ್ರ ಇದನ್ನು ಪಡೆಯುವುದಲ್ಲ. ಹತ್ತಿರದ ಕೆಂಪುಕಲ್ಲು ಕೋರೆಗಳನ್ನು ಮಣ್ಣು ತುಂಬಿಸಿ ತೋಟ ಎಬ್ಬಿಸುವವರೂ ಲೋಡಿಗಿಷ್ಟು ಎಂದು ತೆತ್ತು ಮಣ್ಣು ಒಯ್ದರೆ ಕೆಲಸ ಹಗುರ. ಮನೆ ನಿವೇಶನ ಸಿದ್ಧ ಪಡಿಸುವವರಿಗೂ ಮಣ್ಣು ಪೂರೈಸಬಹುದು. ಈ ಯೋಜನೆ ಯಶಸ್ವಿಯಾಗಲು ಲೋಡ್ ದರವನ್ನು ಸ್ಪರ್ಧಾತ್ಮಕವಾಗಿರಿಸಿ ಕೊಳ್ಳಬೇಕು. ಆಗ, ಹೂಳೂ ಮಾಯವಾಗುತ್ತದೆ, ನೀರು ನಿಲ್ಲುತ್ತದೆ ಪಂಚಾಯತ್‌ಗೂ ಒಂದಿಷ್ಟು ಆದಾಯ ಬರುವ ಸಾಧ್ಯತೆ ಇದೆ. ಸರಕಾರದ ಕೆರೆ ಅಭಿವೃದ್ಧಿ ಯೋಜನೆಯಿಂದಲೂ ಈ ಕಾಮಗಾರಿ ನಡೆಸಬಹುದು. ಆದರೆ ಅದನ್ನು ಗ್ರಾಮ ಪಂಚಾಯತ್ ಮೂಲಕವೇ ಮಾಡಿಸುವುದು ಕ್ಷೇಮ. ಯಾವುದೇ ಇರಲಿ. ಇದಕ್ಕೊಂದು ಪ್ರತ್ಯೇಕ, ಪಾರದರ್ಶಕ ಸಮಿತಿಯನ್ನು ಪಂಚಾಯತ್ ರೂಪಿಸಿ, ಎಲ್ಲರಿಗೂ ಸಮ್ಮತವಾದ ಯೋಜನೆಯನ್ನು ರೂಪಿಸಬೇಕಾಗಿದೆ. ಈಗ ಮಳೆ ಪ್ರಾರಂಭವಾಗಿದೆ. ಮುಂದಿನ ವರ್ಷ ಬೇಸಗೆಯಲ್ಲಿ ಹೇಗೆ ಕಾರ್ಯಾಚರಣೆ ಮಾಡಬಹುದೆಂದು ಈಗಿನಿಂದಲೇ ಯೋಜನೆ ಹಾಕಿಕೊಳ್ಳುವುದುಚಿತ. ಯಾರಿಗೆಲ್ಲ ಉಪಕಾರ
ಪಶ್ಚಿಮದ ಒಂದು ಮೂಲೆಯಿಂದ ಕಲ್ಲಮುಂಡ್ಕೂರಿನತ್ತ, ಈಶಾನ್ಯದ ಒಂದು ಮೂಲೆಯಿಂದ ಪಾಲಡ್ಕ, ಗುಂಡ್ಯಡ್ಕ, ಮತ್ತೂಂದು ಕಡೆಯಿಂದ ಕಡಂದಲೆಯತ್ತ ನೀರು ಸಾಗುವುದು. ಈ ದಿಸೆಯಲ್ಲಿ ಕಡಂದಲೆಯು ಪುತ್ತಿಗೆಗಿಂತ ತಗ್ಗಿನ ಪ್ರದೇಶದಲ್ಲಿರುವುದರಿಂದ ಕಂಚಿಬೈಲಿನಲ್ಲಿ ನೀರು ನಿಂತರೆ ಕಡಂದಲೆಯವರಿಗೆ ವಿಶೇಷ ಲಾಭವೂ ಇದೆ. -ಧನಂಜಯ ಮೂಡುಬಿದಿರೆ