Advertisement
ಸುಳ್ಯ-ಉಬರಡ್ಕ-ಮಿತ್ತೂರು- ದೊಡ್ಡತೋಟ ರಸ್ತೆ ಬದಿ 2 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 45 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಮೊದಲು ಸೇತುವೆ ಕಟ್ಟುವ ವೇಳೆ ಸ್ವಲ್ಪ ಪ್ರಮಾಣದ ಮರಳು, ಸಿಮೆಂಟ್ ಪಯಸ್ವಿನಿ ಪಾಲಾಗಿತ್ತು. ಮತ್ತೆ ಪುನಃ ಸೇತುವೆ ನಿರ್ಮಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಮೊತ್ತ ಪಾವತಿಯಾಗಿಲ್ಲ ಎಂದು ಗುತ್ತಿಗೆ ಪಡೆದುಕೊಂಡವರು ಕಿಂಡಿ ಅಣೆಕಟ್ಟು ನಿರ್ಮಿಸಲು ಬಳಸುವ ಹಲಗೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಈಗ ಹಲಗೆಗಳ ಗುಣಮಟ್ಟ ಕಡಿಮೆಯಾಗಿದೆ. ನೀರಾವರಿ ಇಲಾಖೆಯಿಂದ ದುಡ್ಡು ಸಿಕ್ಕಿಲ್ಲ ಎಂದು ಜನರಿಗೆ ಉಪಕಾರಿಯಾಗಿರುವ ಹಲಗೆಗಳನ್ನು ಇಟ್ಟು ಗೆದ್ದಲು ಬರಿಸುವುದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
Related Articles
Advertisement
ಸ್ಥಳೀಯರು ಈ ನೀರನ್ನೇ ಬಳಸುತ್ತಿರುವುದರಿಂದ ಬೋರ್ ಅಥವಾ ಪರ್ಯಾಯ ಮಾರ್ಗಗಳನ್ನು ಕಂಡು ಕೊಂಡಿಲ್ಲ. ಈಗ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯನ್ನು ಸರಿಯಾದ ರೀತಿ ನಿರ್ವಹಿಸಿ ಜನರ ಬಳಕೆಗೆ ಲಭ್ಯವಾಗಲು ನೂತನ ಆಡಳಿತ ಕಾರಣ ನೀಡದೇ ಕ್ರಮಕ್ಕೆ ಮುಂದಾಗಬೇಕು ಎಂದು ಉಬರಡ್ಕ-ಮಿತ್ತೂರಿನ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಯು ಗುತ್ತಿಗೆದಾರರ ಬಿಲ್ ಪರಿಶೀಲಿಸಬೇಕು ಎನ್ನುವುದು ಸಾರ್ವಜನಿಕರ ಸಲಹೆ.
ಕಿಂಡಿ ಅಣೆಕಟ್ಟು ನಿರ್ಮಿಸಲು ಮಾತ್ರವೇ ಟೆಂಡರ್ ನೀಡಿದ್ದರು. ಆದರೆ ಅದಕ್ಕೆ ನೀಡಬೇಕಾದ ಮೊತ್ತವನ್ನೇ ಇಲಾಖೆ ಮಂಜೂರು ಮಾಡಿಲ್ಲ. ಇದರಿಂದ ನಮಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಮೊತ್ತ ಪಾವತಿಯಾಗುವವರೆಗೆ ಹಲಗೆ ನಮ್ಮಲ್ಲಿ ಇಟ್ಟುಕೊಂಡಿದ್ದೇವೆ. -ಆನಂದ,ಗುತ್ತಿಗೆದಾರ
ಈ ಬಾರಿಯ ಗ್ರಾ.ಪಂ. ಆಡಳಿತ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮೊದಲು ಅಲ್ಲಿನ ಹೂಳನ್ನು ತೆಗೆಸಲಾಗುವುದು. ಹಲಗೆಯ ವ್ಯವಸ್ಥೆ ಆಗಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. -ವಿದ್ಯಾಧರ, ಪಿಡಿಒ, ಉಬರಡ್ಕ-ಮಿತ್ತೂರು
– ಸುದೀಪ್‌ರಾಜ್ ಕೋಟೆಮೂಲೆ