ರಾಯಚೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಗಣಕೀಕೃತ ಕಾನೂನು ಸಹಾಯ ಕೇಂದ್ರಕ್ಕೆ ಶನಿವಾರ ಚಾಲನೆ
ನೀಡಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ್ ಗಣಕೀಕೃತ ಕಾನೂನು ಸಹಾಯ ಕೇಂದ್ರಕ್ಕೆ ಚಾಲನೆ ನೀಡಿ, ಆರೋಪಿ ಮತ್ತು ಅಪರಾಧಿಗಳ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಗಣಕೀಕೃತ ಕಾನೂನು ಸಹಾಯ ಸೇವೆ ಸಹಕಾರಿ.
ವಿಚಾರಣಾಧೀನ ಬಂಧಿಗಳು ಹಾಗೂ ಬಂಧೀ ಖಾನೆಗಳ ನಿವಾಸಿಗಳಿಗೆ ಈ ಕೇಂದ್ರವು ಸಹಾಯಕವಾಗಿದ್ದು, ಇದರಿಂದ ಕೈದಿಗಳು ತಮ್ಮ ಸಮಸ್ಯೆಗಳನ್ನು ನ್ಯಾಯಾಧೀಶರಿಗೆ ನೇರವಾಗಿ ತಲುಪಿಸಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳಾ ಕೈದಿಗಳು ಹಾಗೂ ಅವರ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆರೋಗ್ಯ ಸಮಸ್ಯೆಗಳಿದ್ದರೆ ತಕ್ಷಣವೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಕೂಡ ಮಾಡುತ್ತಿದ್ದು, ಕೈದಿಗಳ ಮಕ್ಕಳಿಗೆ ಶಿಶು ವಿಹಾರ ಆರಂಭಿಸಲಾಗುತ್ತದೆ ಎಂದರು.
ಕೈದಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ಜಿಲ್ಲಾ ಕಾರಾಗೃಹದ ಅಧೀಕ್ಷಕರ ಮೂಲಕ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಕೂಡಲೇ ತಿಳಿಸಿ ಪರಿಹಾರ ಪಡೆಯಬಹುದು. ಕಾನೂನು ಪ್ರಾಧಿಕಾರದಲ್ಲಿ ನುರಿತ ವಕೀಲರಿದ್ದಾರೆ. ಆದರೆ, ಕೈದಿಗಳು ಅವರ ಸಹಾಯ ಪಡೆಯಲು ಹಿಂಜರಿಯುತ್ತಾರೆ. ಯಾವುದೇ ಅಳುಕಿಲ್ಲದೇ ಅನುಭವಿ ವಕೀಲರ ಸಹಾಯ ಪಡೆದು ಮುಂದಿನ ಜೀವನ ಸುಗಮ ಮಾಡಿಕೊಳ್ಳಿ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಮೂಲ ಉದ್ದೇಶ ಹಾಗೂ ಸೌಲಭ್ಯಗಳ ಬಗ್ಗೆ ಕೈದಿಗಳು ತಿಳಿಯಬೇಕು. ಗಣಕೀಕೃತ ಸೇವಾ ಕೇಂದ್ರದಿಂದ ನೇರವಾಗಿ ಸರ್ವೋತ್ಛ ನ್ಯಾಯಾಲಯ ಹಾಗೂ ರಾಷ್ಟ್ರೀಯ ಕಾನೂನು ಪ್ರಾಧಿಕಾರ ಸಂಪರ್ಕಿಸಬಹುದು. ಅಗತ್ಯವಿದ್ದರೆ ಕಾರಾಗೃಹದಲ್ಲಿ ಲೋಕ ಅದಾಲತ್ ನಡೆಸಲಾಗುವುದು ಎಂದರು.
ಪ್ರಧಾನ ಹಿರಿಯ ಶ್ರೇಣಿ ಹಾಗೂ ಸಿಜೆಎಂ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮಾತನಾಡಿ, ಜೈಲಲ್ಲಿದ್ದರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿಲ್ಲ. ಆದರೆ, ನೀವು ಇಲ್ಲಿಂದ ಹೊರಹೋದ ಮೇಲೆ ಸಮಾಜಕ್ಕೆ ಮಾದರಿಯಾಗಿ ಬಾಳಬೇಕು ಎಂದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಂ.ಶಹಾಬುದ್ದೀನ್ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಇತರರು ಇದ್ದರು.