ಹುಬ್ಬಳ್ಳಿ: ನಗರದ ಕಿಮ್ಸ್‌ನಲ್ಲಿ ನಿರ್ಮಾಣಗೊಂಡಿರುವ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಶೇ.90ರಷ್ಟು ಮುಗಿದಿದೆ. ವೈದ್ಯಕೀಯ ಉಪಕರಣಗಳ ಅಳವಡಿಕೆ ಹಾಗೂ ಸಿಬ್ಬಂದಿ ನೇಮಕ ಬಾಕಿಯಿದ್ದು, ಮಾಸಾಂತ್ಯಕ್ಕೆ ಪೂರ್ಣಗೊಂಡು ಜುಲೈ ಮಧ್ಯಂತರದಲ್ಲಿ ಒಪಿಡಿ ವಿಭಾಗ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಅಡಿ 120 ಕೋಟಿ ಹಾಗೂ ರಾಜ್ಯ ಸರಕಾರದ 30 ಕೋಟಿ ಅನುದಾನ ಸೇರಿ ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ಅಂದಾಜು 6.5 ಎಕರೆ ಜಾಗದಲ್ಲಿ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣಗೊಂಡಿದೆ. ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಾ. 6ರಂದೇ ಕಲಬುರ್ಗಿಯಿಂದ ಡಿಜಿಟಲ್ ತಂತ್ರಜ್ಞಾನ ಮುಖಾಂತರ ಉದ್ಘಾಟಿಸಿದ್ದರು.
ನಾಸಿಕ್ ಮೂಲದ ಹರ್ಷ ಕನ್‌ಸ್ಟ್ರಕ್ಷನ್ ಕಂಪನಿ ಅಂದಾಜು 1ಲಕ್ಷ 70 ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಜಿ+5 ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದೆ. ಕೇಂದ್ರ ಸರಕಾರ ಸ್ವಾಮ್ಯದ ಹೈದರಾಬಾದ್ ಮೂಲದ ಎಚ್ಎಲ್ಎಲ್-ಹೈಟ್ಸ್ ಕಂಪನಿ ಕಾಮಗಾರಿ ನಿರ್ವಹಣೆ ಮಾಡುತ್ತಿದೆ. ಬಾಕಿ ಉಳಿದ ಸಣ್ಣಪುಟ್ಟ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಿ ಕೊಡುವುದಾಗಿ ಕಟ್ಟಡ ಕಾಮಗಾರಿ ನಿರ್ವಹಣೆ ಹೊತ್ತಿರುವ ಹರ್ಷ ಕಂಪೆನಿಯವರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
600 ಹುದ್ದೆ: ಸುಪರ್ ಸ್ಪೆಶಾಲಿಟಿಆಸ್ಪತ್ರೆಗೆ ಒಟ್ಟು 60 ವೈದ್ಯರು ಹಾಗೂ ನರ್ಸ್, ತಂತ್ರಜ್ಞರು, ಸ್ವೀಪರ್ ಸೇರಿ ಒಟ್ಟು 600 ಹುದ್ದೆಗಳು ಬೇಕು. ಅದರಲ್ಲಿ ಹಂತ ಹಂತವಾಗಿ ವೈದ್ಯರು ಮತ್ತು ನರ್ಸ್‌ಗಳನ್ನು ಕಿಮ್ಸ್‌ನಿಂದ ಸ್ಥಳಾಂತರಿಸಲಾಗುತ್ತದೆ. ಬಾಕಿ ಉಳಿದಿರುವ 25 ವೈದ್ಯರು ಹಾಗೂ ಸಿ ಮತ್ತು ಡಿ ದರ್ಜೆಯ ನೌಕರರ ನೇಮಕಕ್ಕೆ ಕಿಮ್ಸ್‌ನ ನಿರ್ದೇಶಕರು ಸರಕಾರದ ಆರ್ಥಿಕ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಅನುಮೋದನೆ ನೀಡಿದೆ. ಈಗ ಆರೋಗ್ಯ ಇಲಾಖೆ ಕಾರ್ಯದರ್ಶಿಯಿಂದ ಅನುಮತಿ ದೊರೆಯುವುದು ಮಾತ್ರ ಬಾಕಿ ಉಳಿದಿದೆ. ಇದೆಲ್ಲ ಈಡೇರಿದರೆ ಜುಲೈ ಮಧ್ಯಂತರದಲ್ಲಿ ಆಸ್ಪತ್ರೆ ಜನರ ಸೇವೆಗೆ ಲಭ್ಯವಾಗಲಿದೆ.
ಎಲ್ಲೆಲ್ಲಿ ಏನೇನಿದೆ?:
ಮೊದಲ ಮಹಡಿ ನರವಿಜ್ಞಾನ, ನರ ಶಸ್ತ್ರಚಿಕಿತ್ಸೆ ವಿಭಾಗ
ನೆಲಮಹಡಿ
ಆಡಳಿತ ಕಚೇರಿ, ಲೆಕ್ಕಪತ್ರ ವಿಭಾಗ, ಸೇವಾ ಕಚೇರಿಗಳು
ಮೂರನೇ ಮಹಡಿ ಮೂತ್ರಪಿಂಡ ಶಾಸ್ತ್ರ, ಮೂತ್ರಶಾಸ್ತ್ರ ವಿಭಾಗ
ಐದನೇ ಮಹಡಿ 6 ಸುಸಜ್ಜಿತ ಶಸ್ತ್ರಚಿಕಿತ್ಸಾ ಘಟಕ, 40 ಹಾಸಿಗೆ ಐಸಿಯು ಘಟಕ
ನಾಲ್ಕನೇ ಮಹಡಿ
ಪ್ಲಾಸ್ಟಿಕ್ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗ
ಎರಡನೇ ಮಹಡಿಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ವೈದ್ಯಕೀಯ ಗ್ರಂಥಿಶಾಸ್ತ್ರ ವಿಭಾಗ
•ಶಿವಶಂಕರ ಕಂಠಿ