ಹುಬ್ಬಳ್ಳಿ: ಬದುಕಿದ್ದ ಯುವಕನನ್ನೇ ಸಾವನ್ನಪ್ಪಿರುವುದಾಗಿ ಘೋಷಿಸಿ ಸತತ 7ಗಂಟೆಗಳ ಕಾಲ ಶವಾಗಾರದಲ್ಲಿಟ್ಟು ಯಡವಟ್ಟು ಮಾಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ಬೇಜವಾಬ್ದಾರಿ ಖಂಡಿಸಿ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ(23ವರ್ಷ) ಎಂಬ ಯುವಕನಿಗೆ ಕಾರು ಅಪಘಾತದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8ಗಂಟೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂದರ್ಭದಲ್ಲಿ ಕಿಮ್ಸ್ ವೈದ್ಯರು ಬೆಳಗಿನ ಜಾವ 3ಗಂಟೆ ಸುಮಾರಿಗೆ ಪ್ರವೀಣ್ ಸಾವನ್ನಪ್ಪಿರುವುದಾಗಿ ಹೇಳಿ, ಶವವನ್ನು ಶವಾಗಾರದಲ್ಲಿ ಇರಿಸಲು ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಏತನ್ಮಧ್ಯೆ ಬೆಳಗ್ಗೆ 10ಗಂಟೆಗೆ ಪ್ರವೀಣ್ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗ ಆತ 20ನಿಮಿಷಗಳ ಹಿಂದಷ್ಟೇ ಸಾವನ್ನಪ್ಪಿರುವ ಮಾಹಿತಿ ಬಯಲಾಗಿತ್ತು. ಆಗ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ಯಡವಟ್ಟಿಗೆ ಪ್ರವೀಣ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶವಾಗಾರದಲ್ಲಿ ಸುಮಾರು 7ತಾಸುಗಳ ಕಾಲ ಪ್ರವೀಣ್ ಬದುಕಿಯೇ ಇದ್ದು, ಮರಣೋತ್ತರ ಪರೀಕ್ಷೆ ನಡೆಸುವ ಕೆಲವೇ ಕ್ಷಣದ ಮುನ್ನ ಆತನ ಪ್ರಾಣ ಪಕ್ಷಿ ಹಾರಿ ಹೋಗಿರುವುದಾಗಿ ವರದಿ ವಿವರಿಸಿದೆ.