Advertisement

ಮತ್ತೆ ಮುಷ್ಕರ ಆರಂಭಿಸಿದ ಕಿಮ್ಸ್‌ ವೈದ್ಯರು, ಸಿಬ್ಬಂದಿ

01:11 PM Jul 17, 2018 | |

ಬೆಂಗಳೂರು: ಅನಗತ್ಯವಾಗಿ ನೇಮಕವಾಗಿರುವ ಸಿಬ್ಬಂದಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥೆಗಳ ನೌಕರರ ಸಂಘದ ನೇತೃತ್ವದಲ್ಲಿ ವೈದ್ಯರು, ಸಿಬ್ಬಂದಿ ಸೋಮವಾರದಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಕೆ.ಆರ್‌.ರಸ್ತೆಯಲ್ಲಿರುವ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೋಮವಾರ ಹೊರ ರೋಗಿ ವಿಭಾಗದ ಚಿಕಿತ್ಸೆಯಲ್ಲಿ ತುಸು ವ್ಯತ್ಯಯ ಉಂಟಾಗಿತ್ತು.

Advertisement

 ಪ್ರತಿಭಟನೆ ಹಿನ್ನೆಲೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಆಡಳಿತ ಮಂಡಳಿಯು ಯಾವುದೇ ಕಾರಣಕ್ಕೂ ನೇಮಕಗೊಂಡ ಸಿಬ್ಬಂದಿಯನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಸಂಘ ನಿರ್ಧರಿಸಿದೆ.

ಹಾಲಿ ಕಾಯಂ ನೌಕರ, ಸಿಬ್ಬಂದಿಗೆ ಸಕಾಲದಲ್ಲಿ ವೇತನ ನೀಡುತ್ತಿಲ್ಲ. ಹೀಗಿರುವಾಗ ಅನಗತ್ಯವಾಗಿ ಸಿಬ್ಬಂದಿಯನ್ನು ಯಾವುದೇ ಮಾನದಂಡ, ಅರ್ಹತೆ ನಿಗದಿಪಡಿಸದೆ ನೇಮಕ ಮಾಡಿಕೊಂಡಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು 12 ದಿನ ಮುಷ್ಕರ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಅನಗತ್ಯ ಸಿಬ್ಬಂದಿ ಕೈಬಿಡುವುದಾಗಿ ಹೇಳಿದ್ದ ಆಡಳಿತ ಮಂಡಳಿ ನಂತರ ಕ್ರಮ ಕೈಗೊಂಡಿಲ್ಲ. ಜು.14ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ
ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತೆ ಹೋರಾಟ ಆರಂಭಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಎ.ಸಿ.ವಿನೋದ್‌ ಕುಮಾರ್‌ ಹೇಳಿದರು.

ಸೋಮವಾರ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಿ.ಎನ್‌.ಬೆಟ್ಟೇಗೌಡ, ಕಾರ್ಯದರ್ಶಿ ಪ್ರೊ.ನಾಗರಾಜ್‌, ಖಜಾಂಜಿ ಕಾಳೇಗೌಡ ಅವರೊಂದಿಗೆ ಸಭೆ ನಡೆಯಿತು. ಆಗ ಆಡಳಿತ ಮಂಡಳಿಯು ಯಾವುದೇ ಸಿಬ್ಬಂದಿಯನ್ನು ಕೈಬಿಡುವುದಿಲ್ಲ, ಆ ಬಗ್ಗೆ ಪ್ರಶ್ನಿಸುವ ಹಕ್ಕು ನೌಕರರ ಸಂಘಕ್ಕೆ ಇಲ್ಲ ಎಂದು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
 
ರೋಗಿಗಳಿಗೆ ತೊಂದರೆಯಾಗಿಲ್ಲ: ಕಿಮ್ಸ್‌ ಆಸ್ಪತ್ರೆಗೆ ಬರುವ ಹೊರ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಡಯಾಲಿಸಿಸ್‌ ಸೇವೆಯೂ ಎಂದಿನಂತೆ ನಡೆದಿದ್ದು, ಪೂರ್ವ ನಿಗದಿತ ಶಸ್ತ್ರಚಿಕಿತ್ಸೆಗಳನ್ನೂ ಮುಂದೂಡಿಲ್ಲ. 51 ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ. ಕಿರಿಯ ವೈದ್ಯರನ್ನು ಹೊಂದಿಸಿಕೊಂಡು ಮಂಗಳವಾರವೂ ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಿಮ್ಸ್‌ನ ಆಡಳಿತ ವೈದ್ಯಾಧಿಕಾರಿ ಡಾ.ಎಲ್‌. ಮಧುಶಂಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next