Advertisement

Kims: ನರ್ಸ್ ಗಳ ಬಗ್ಗೆ ಅವಹೇಳನಕರ ರೀಲ್ಸ್; 15 ಎಂಬಿಬಿಎಸ್ ವಿದ್ಯಾರ್ಥಿಗಳು ಅಮಾನತು

07:17 PM Aug 08, 2023 | Team Udayavani |

ಹುಬ್ಬಳ್ಳಿ: ಶುಶ್ರೂಷಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಿಮ್ಸ್ ನ ನಿರ್ದೇಶಕರು ಕಾಲೇಜಿನ 15 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತರಗತಿಗಳಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹರಿಬಿಟ್ಟ ವಿಡಿಯೋದ ಕುರಿತು ವಿಚಾರಣೆ ನಡೆಸಲು ಏಳು ಸದಸ್ಯರ ಸಮಿತಿ ರಚಿಸಿದ್ದಾರೆ.

Advertisement

ಕಿಮ್ಸ್ ನ ಎಂಬಿಬಿಎಸ್ ವಿದ್ಯಾರ್ಥಿಗಳು ಚಿತ್ರವೊಂದರ ಹಾಡಿಗೆ ನರ್ಸ್ ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದು ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ಶುಶ್ರೂಷಾಧಿಕಾರಿಗಳು, ವಿದ್ಯಾರ್ಥಿಗಳು ನಮ್ಮನ್ನು ಅವಮಾನಿಸಿದ್ದಾರೆ ಎಂದು ಕಿಮ್ಸ್ ನ ಆಡಳಿತ ಕಚೇರಿ ಎದುರು ಸೋಮವಾರ ದಿಢೀರನೆ ಪ್ರತಿಭಟನೆ ನಡೆಸಿ, ರೀಲ್ಸ್ ಮಾಡಿದ್ದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಿಮ್ಸ್ ನ ನಿರ್ದೇಶಕರು ಮತ್ತು ಆಡಳಿತ ಮಂಡಳಿಯವರಿಗೆ ಆಗ್ರಹಿಸಿದ್ದರು.

ಹೀಗಾಗಿ ನಿರ್ದೇಶಕರು ಕಾಲೇಜಿನ 15 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ತರಗತಿಗಳಿಂದ ಅಮಾನತು ಮಾಡಿದ್ದಾರೆ. ಜೊತೆಗೆ ಇದರ ವಿಚಾರಣೆಗಾಗಿ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಅಧ್ಯಕ್ಷತೆಯಲ್ಲಿ ಏಳು ಜನ ಸದಸ್ಯರ ಸಮಿತಿ ರಚಿಸಿದ್ದು, ಆ. 11ರೊಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಕ್ಷಮೆ ಕೇಳಿರುವ ವಿದ್ಯಾರ್ಥಿಗಳು, ರೀಲ್ಸ್ ಮಾಡಿದ್ದು ಮನೋರಂಜನೆಗಾಗಿ, ಆದರೂ ನಾವು ನರ್ಸ್ ಗಳ ಕ್ಷಮೆ ಕೇಳುತ್ತೇವೆ ಎಂದು ವೀಡಿಯೋ ಮೂಲಕ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next