ಸಿಯೋಲ್: ಉತ್ತರ ಕೊರಿಯಾದ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಾಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಪುತ್ರಿ ಕಿಮ್ ಜು ಉಇ ಭಾನುವಾರ ಶೀಘ್ರದಲ್ಲಿಯೇ ಉಡಾಯಿಸಲಾಗುತ್ತದೆ ಎಂದು ಹೇಳಲಾಗಿರುವ ಖಂಡಾಂತರ ಕ್ಷಿಪಣಿ (ಐಸಿಬಿಎಂ)ಯ ಸಿದ್ಧತೆಯನ್ನು ಪರಿಶೀಲಿಸಿದ್ದಾಳೆ.
ತಂದೆಯ ಜತೆಗೆ “ಹ್ವಸಾಂಗ್-17′ ಎಂಬ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಸಿದ್ಧತೆಯನ್ನು ಆಕೆ ಪರಿಶೀಲಿಸಿದ್ದಾಳೆ. ಈ ಬಗ್ಗೆ ಸರ್ಕಾರಿ ಸುದ್ದಿ ಸಂಸ್ಥೆ “ಕೆಸಿಎನ್‌ಎ’ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ಇತ್ತೀಚಿನ ಹಲವು ಸಂದರ್ಭಗಳಲ್ಲಿ ಕಿಮ್ ಜಾಂಗ್ ಉನ್‌ನ ಆರೋಗ್ಯ ವಿಷಮಿಸುತ್ತಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಈ ಅಂಶ ಮಹತ್ವ ಪಡೆದಿದೆ. ಪುತ್ರಿಯ ವಯಸ್ಸು 12 ಅಥವಾ 13 ಇರಬಹುದು ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ ಸರ್ವಾಧಿಕಾರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ. ಒಂದು ವೇಳೆ ಪುತ್ರಿಗೆ ಮುಂದಿನ ನಾಯಕತ್ವ ಎನ್ನುವುದು ಖಚಿತವಾದರೆ ಆತನ ಕುಟುಂಬದ ನಾಲ್ಕನೇ ತಲೆಮಾರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂಬ ವಿಶ್ಲೇಷಣೆ ನಡೆದಿದೆ.