Advertisement

ಕಿಲ್ಪಾಡಿ ಗ್ರಾ.ಪಂ. ನರೇಗಾ ಸಭೆ 

10:23 AM Oct 31, 2017 | Team Udayavani |

ಮೂಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ
223 ಜನರ ಹೆಸರು ನೋಂದಣಿಯಾಗಿದ್ದು, ಅದರಲ್ಲಿ 104 ಜನರು ಮಾತ್ರ ಕರ್ತವ್ಯ ನಿರತರಾಗಿದ್ದಾರೆ. ಉಳಿದವರ ನೋಂದಣಿ ರದ್ದಾಗಿದ್ದು, ಅವರು ಮರು ನೋಂದಣಿ ಮಾಡುವುದು ಅಗತ್ಯವಾಗಿದೆ ಎಂದು ಮಹಾತ್ಮಾಗಾಂದಿ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ತಾಲೂಕು ಸಂಯೋಜಕಿ ಪವಿತ್ರಾ ಶೆಟ್ಟಿ ತಿಳಿಸಿದರು.

Advertisement

ನೋಡಲ್‌ ಅಧಿಕಾರಿ ಪ್ರದೀಪ್‌ ಭಟ್‌ ಅಧ್ಯಕ್ಷತೆಯಲ್ಲಿ ಜರಗಿದ ನರೇಗಾ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಪಂಚಾಯತ್‌ನ ನರೇಗಾ ಕಾಮಗಾರಿಗಳಲ್ಲಿ ಕೆಲವು ನ್ಯೂನತೆಗಳನ್ನು ಅವರು ಗುರುತಿಸಿದರು. ಅದನ್ನು ಸರಿಪಡಿಸುವುದಾಗಿ ಪಿಡಿಒ ಹರಿಶ್ಚಂದ್ರ ಹೇಳಿದರು. ಮೂರು ದಿನಗಳಿಂದ ಪರಿಶೀಲನೆ ನಡೆಸಿ ನಾಲ್ಕನೇ ದಿನವಾದ ಸೋಮವಾರ ಯೋಜನೆಯ ಪಾರದರ್ಶಕತೆಗಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು

ಪಂಚಾಯತ್‌ ಅಧ್ಯಕ್ಷ ಶ್ರೀಕಾಂತ್‌ ರಾವ್‌ ಮಾತನಾಡಿ, ಗ್ರಾಮದ ಜನರು ಯೋಜನೆಯಲ್ಲಿ ನೋಂದಾಯಿಸಿಕೊಂಡು ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು. ಸಾರ್ವಜನಿಕ ಬಾವಿಗಳ ರಿಪೇರಿ, ರಸ್ತೆ ಬದಿ ಹುಲ್ಲು ಕೀಳುವುದು ಮತ್ತು ಚರಂಡಿ ರಿಪೇರಿ ಮುಂತಾದ ಅಗತ್ಯ ಕೆಲಸಗಳನ್ನು ಈ ಯೋಜನೆಯಲ್ಲಿ ಸೇರಿ ಅವಕಾಶವನ್ನು
ಪಡೆಯಲು ಅಧಿಕಾರಿಗಳು ಸರಕಾರಕ್ಕೆ ವರದಿ ನೀಡಿ ಮಂಜೂರಾತಿ ಪಡೆದು ಪಂಚಾಯತ್‌ನ ಕೆಲವೊಂದು
ಕಾರ್ಯಕ್ರಮಗಳು ಸುಗಮವಾಗಲು ಸಹಕರಿಸುವಂತೆ ಮನವಿ ಮಾಡಿದರು.

6 ತಿಂಗಳಲ್ಲಿ 18 ಕಾಮಗಾರಿ
ಕಳೆದ ಆರು ತಿಂಗಳಲ್ಲಿ ಒಟ್ಟು 17 ವೈಯಕ್ತಿಕ ಕಾಮಗಾರಿಗಳು ಹಾಗೂ 1 ಸಾರ್ವಜನಿಕ ಕಾಮಗಾರಿಯು ಸುಮಾರು 6.52ಲಕ್ಷ ರೂ. ವೆಚ್ಚದಲ್ಲಿ ನಡೆದಿದೆ. ಇವುಗಳನ್ನು ಗ್ರಾಮ ಸಭೆಯ ಮುಂದೆ ಕ್ರಿಯಾ ಯೋಜನೆ ತಯಾರಿಸಿ ಸಭೆಯಲ್ಲಿ ನಿರ್ಣಯ ಮಂಡಿಸದೆ ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ ಅನುಮೋದನೆಗೆ ಕಳುಹಿಸಲಾಗಿರುವುದು ಸರಿಯಾದ
ಕ್ರಮವಲ್ಲ, ನಡಾವಳಿ ಪುಸ್ತಕವನ್ನು ನಿರ್ವಹಣೆ ಮಾಡಲಾಗಿಲ್ಲ ಹಾಗೂ ಎರಡು ಅವಧಿಗಳಿಂದ ಸಲಕರಣೆ ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗಿಲ್ಲ ಎಂದು ಪರಿಶೀಲನ ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯೋಗ ಚೀಟಿಯಲ್ಲಿ ಆರ್ಥಿಕ ವರ್ಷದ ಎಲ್ಲ ದಾಖಲೆಗಳನ್ನು ವಿವರವಾಗಿ ತೋರಿಸಲಾಗಿರುವುದು ಉತ್ತಮ ಕ್ರಮ ಎಂದು ಶ್ಲಾಘನೆ ವ್ಯಕ್ತವಾಯಿತು.

ಕಿರಿಯ ಎಂಜಿನಿಯರ್‌ಗಳಾದ ಅಜಿತ್‌ ಹಾಗೂ ಹರೀಶ್‌ ಉಪಸ್ಥಿತರಿದ್ದರು. ಸದಸ್ಯರಾದ ಅಬ್ದುಲ್‌ ಶರೀಫ್‌, ನಾಗರಾಜ್‌, ದಮಯಂತಿ ಶೆಟ್ಟಿ, ಶಾಂತಾ ಹಾಗೂ ಸಾವಿತ್ರಿ ಉಪಸ್ಥಿತರಿದ್ದರು.

Advertisement

ರೇಶನ್‌ ಕಾರ್ಡ್‌ ಸಮಸ್ಯೆ
ಕಿಲ್ಪಾಡಿ ಗ್ರಾಮದ ಪರಿಶಿಷ್ಟ ಜಾತಿಯ ಸುಬ್ಬಿ ಎಂಬವರು ತನಗೆ ರೇಶನ್‌ ಕಾರ್ಡು ನವೀಕರಣದ ಬಗ್ಗೆ ಆಗುತ್ತಿರುವ ಸಮಸ್ಯೆಯನ್ನು ತಿಳಿಸಿದಾಗ, ಅದನ್ನು ಪಂಚಾಯತ್‌ನ ಮಾಮೂಲು ಸಭೆಯಲ್ಲಿ ಚರ್ಚಿಸಲು ಅಧಿಕಾರಿಗಳು ಸೂಚಿಸಿದರು. ರೇಶನ್‌ ಕಾರ್ಡ್‌ ಸಮಸ್ಯೆಯಿಂದಾಗಿ ತನಗೆ ತುಂಬಾ ನಷ್ಟವಾಗಿದೆ ಎಂದು ಹಲವು ಉದಾಹರಣೆಯೊಂದಿಗೆ ಆಕೆ ವಿವರಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next