Advertisement

ನಕ್ಸಲಿಸಂ ತೊರೆದು ಪೊಲೀಸ್‌ ಆದವರ ಹತ್ಯೆ!

08:28 PM Apr 28, 2023 | Team Udayavani |

ರಾಯ್ಪುರ: ಛತ್ತೀಸ್‌ಗಢದ ದಂತೇವಾಡದಲ್ಲಿ ಏ.26ರಂದು ನಡೆದ ನಕ್ಸಲ್‌ ದಾಳಿಯಲ್ಲಿ ಮೃತಪಟ್ಟ 10 ಪೊಲೀಸರ ಪೈಕಿ ಐವರು, ಒಂದು ಕಾಲದಲ್ಲಿ ಸಕ್ರಿಯ ನಕ್ಸಲರಾಗಿದ್ದರು! ಬಳಿಕ ಮನ ಪರಿವರ್ತನೆಗೊಂಡು, ದೇಶಸೇವೆಗಾಗಿ ಪೊಲೀಸ್‌ ಇಲಾಖೆ ಸೇರ್ಪಡೆಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಸ್ತಾರ್‌ ರೇಂಜ್‌ನ ಐಜಿಪಿ ಸುಂದರ್‌ ರಾಜ್‌ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ಪೊಲೀಸ್‌ ತುಕಡಿಯ ಭಾಗವಾಗಿರುವ ಜಿಲ್ಲಾ ಮೀಸಲು ರಕ್ಷಣಾ ಪಡೆ (ಡಿಆರ್‌ಜಿ)ಯನ್ನು “ಮಣ್ಣಿನ ಮಕ್ಕಳ ಪಡೆ’ ಎಂದೇ ಕರೆಯಲಾಗುತ್ತದೆ. ದೇಶಸೇವೆಗೆ ಹಾತೊರೆಯುತ್ತಿರುವ ಸ್ಥಳೀಯ ಯುವಕರು, ನಕ್ಸಲ್‌ವಾದ ತೊರೆದು, ಸೇವೆಗೆ ಮುಂದಾಗುವ ಯುವಕರನ್ನು ಈ ಪಡೆಗೆ ನೇಮಿಸಿಕೊಳ್ಳಲಾಗುತ್ತದೆ.

ಈ ರೀತಿ ನೇಮಕಗೊಂಡು, ಒಂದು ಕಾಲದಲ್ಲಿ ನಕ್ಸಲರೇ ಆಗಿದ್ದು, ಇಂದು ನಕ್ಸಲರ ವಿರುದ್ಧ ಹೋರಾಟದಲ್ಲೇ ಮಡಿದವರು ಮುಖ್ಯ ಪೇದೆಗಳಾದ ಜೋಗಾ ಸೋಡಿ, ಮುನ್ನಾ ಕಾಡ್ತಿ, ಹರಿರಾಮ್‌ ಮಾಂಡವಿ, ಜೋಗಾ ಕವಾಸಿ ಹಾಗೂ ಗೋಪ್ನಿಯಾ ಸೈನಿಕ್‌ ಎಂದು ಸುಂದರ್‌ ರಾಜ್‌ ತಿಳಿಸಿದ್ದಾರೆ.

ಕೆಲವರ್ಷಗಳ ಹಿಂದಷ್ಟೇ ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ವಿವಿಧ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಶರಣಾಗಿದ್ದರು. ಬಳಿಕ 2017ರಲ್ಲಿ ಜೋಡಾ ಮತ್ತು ಕಾಡ್ತಿ ಇಲಾಖೆಗೆ ಸೇರ್ಪಡೆಗೊಂಡರು. ಅದೇ ರೀತಿ ಹರಿರಾಮ್‌ ಮತ್ತು ಗೋಪ್ನಿಯಾ 2020 ಹಾಗೂ 2022ರಲ್ಲಿ ಸೇರ್ಪಡೆಗೊಂಡಿದ್ದರು. ಕವಾಸಿ ಕೇವಲ ಒಂದು ತಿಂಗಳ ಹಿಂದಷ್ಟೇ ಡಿಆರ್‌ಜಿಗೆ ಸೇರ್ಪಡೆಗೊಂಡಿದ್ದರು ಎಂದಿದ್ದಾರೆ.

2 ತಿಂಗಳ ಹಿಂದೆಯೇ ಬಾಂಬ್‌ ಹೂತಿಡಲಾಗಿತ್ತು
10 ಮಂದಿ ಪೊಲೀಸರ ಸಾವಿಗೆ ಕಾರಣವಾದ 40 ರಿಂದ 50 ಕೆಜಿ ತೂಕದ ಐಇಡಿಗಳನ್ನು, 2 ತಿಂಗಳ ಹಿಂದೆಯೇ ಹೂತಿಡಲಾಗಿತ್ತು ಎಂಬ ಸಂಗತಿ ಪ್ರಕರಣದ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿದುಬಂದಿದೆ. ಸ್ಫೋಟಕಗಳ ವೈರ್‌ಗಳ ಮೇಲೆಯೇ ಸಸ್ಯಗಳು ಬೆಳೆದುಕೊಂಡಿವೆ. ಘಟನೆಗೂ ಒಂದು ದಿನ ಮುಂಚೆ ಅದೇ ಪ್ರದೇಶದಲ್ಲಿ ಡಿಮೈನಿಂಗ್‌ ನಡೆಸಿದಾಗಲೂ ಸ್ಫೋಟಕಗಳು ಪತ್ತೆಯಾಗಿಲ್ಲ. ಇದು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಜಿಪಿ ಸುಂದರ್‌ರಾಜ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next