Advertisement

ಭಾವನ ಕೊಂದಿದ್ದ ಭಾವಮೈದುನ ಸೆರೆ

11:34 AM Mar 12, 2017 | |

ಬೆಂಗಳೂರು: ನಗರದಲ್ಲಿ ಇತ್ತೀಚೆಗಷ್ಟೇ ಭಾವನನ್ನೇ ಕೊಂದಿದ್ದ ಆರೋಪಿ ಚಿಕ್ಕದೇವಸಂದ್ರದ ನಿವಾಸಿ ರಾಜಕುಮಾರ್‌ (35) ಎಂಬಾತನನ್ನು ಕೆ.ಆರ್‌ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನ್ನ ಅಕ್ಕನ ಸಾವಿಗೆ ಭಾವ ಚೆಲುವರಾಯನೇ ಕಾರಣ ಎಂದು ರಾಜಕುಮಾರ್‌ ಹಗೆ ಸಾಧಿಸುತ್ತಿದ್ದ.

Advertisement

ಮಾರ್ಚ್‌ 7ರಂದು ಮಾತನಾಡುವ ಸಲುವಾಗಿ ತನ್ನ ಭಾವನನ್ನು ಮನೆಗೆ ಕರೆಸಿಕೊಂಡಿದ್ದ ರಾಜಕುಮಾರ್‌,  ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಬಳಿಕ ಕೋಲಾರದ ಸ್ನೇಹಿತರೊಬ್ಬರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾಜಕುಮಾರ್‌ನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು  ಪೊಲೀಸರು ತಿಳಿಸಿದರು.

ಕೊಲೆಯಾದ ಚೆಲುವರಾಯ ಕಳೆದ 10 ವರ್ಷಗಳ ಹಿಂದೆ ರಾಜ್‌ಕುಮಾರ್‌ ಅಕ್ಕ ಮಂಜುಳಾ ಎಂಬಾಕೆಯನ್ನು ವಿವಾಹವಾಗಿದ್ದ. ಮದುವೆಯಾದ ಕೆಲವು ವರ್ಷದ ಬಳಿಕ ಕೌಟುಂಬಿಕ ಕಲಹದಿಂದ ಬೇಸತ್ತು ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ,  ಚೆಲುವರಾಯನೇ ತನ್ನ ಸಹೋದರಿ ಯನ್ನು ಕೊಲೆ ಮಾಡಿದ್ದಾನೆ ಎಂದು ರಾಜಕುಮಾರ್‌ ಭಾವಿಸಿದ್ದ. ಅಲ್ಲದೇ, ಆಕೆಯ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. 

ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಚೆಲುವರಾಯ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ಬೇರೊಂದು ಮದುವೆ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ರಾಜ್‌ಕುಮಾರ್‌ ಚೆಲುವರಾಯ ಜತೆ ಹಲವು ಬಾರಿ ಜಗಳವಾಡಿದ್ದ. ಮಾರ್ಚ್‌ 7ರಂದು  ಮಾತುಕತೆಗಾಗಿ ಚಿಕ್ಕದೇವಸಂದ್ರದ ಮನೆಗೆ ಕರೆಸಿಕೊಂಡಿದ್ದ.  ಆಗ ಇಬ್ಬರ ಮಧ್ಯೆ ಜಗಳವಾಗಿ ಅದು ವಿಕೋಪಕ್ಕೆ ಹೋಗಿ ರಾಜ್‌ಕುಮಾರ್‌, ಚೆಲುವರಾಯನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next