ಬೆಂಗಳೂರು: ವೃದ್ಧೆಯೊಬ್ಬಳ ಜತೆ ಸಹ ಜೀವನ (ಲಿವ್ ಇನ್) ನಡೆಸುತ್ತಿದ್ದ ವೃದ್ಧ ಟೈಲರ್ ಆಕೆಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರದ ವನ್ನಾರಪೇಟೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಸೋಮವಾರ ನಡೆದಿದೆ.
ಕೇರಳ ಮೂಲದ ದೊಮ್ಮಲೂರು ನಿವಾಸಿ ರವೀಂದ್ರನ್(70) ಹಾಗೂ ಕೊಡಗು ಮೂಲದ ಉಮಾ (65) ಮೃತರು. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ಹಣಕಾಸು ಸಮಸ್ಯೆಯಿಂದ ಬೇಸರಗೊಂಡಿದ್ದ ರವೀಂದ್ರನ್ ಉಮಾರನ್ನು ಕೊಂದು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3-4 ದಿನಗಳ ಹಿಂದೆಯೇ ಘಟನೆ ನಡೆದಿದ್ದು, ಅಂಗಡಿಯಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಸೋಮವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ರವೀಂದ್ರನ್‌ಗೆ ಈಗಾಗಲೇ ವಿವಾಹವಾಗಿದ್ದು, ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ದೊಮ್ಮಲೂರಿನಲ್ಲಿ ಕುಟುಂಬ ವಾಸವಾಗಿದೆ. ರವೀಂದ್ರನ್ ಹಲಸೂರಿನ ಸೇನಾ ಕ್ಯಾಂಪ್‌ನ ಸಿಬ್ಬಂದಿಗೆ ಸಮವಸ್ತ್ರ ಪೂರೈಕೆ ಮಾಡುತ್ತಿದ್ದರು. ಇದೇ ಅಂಗಡಿಯಲ್ಲಿ ಉಮಾ 1981ರಿಂದ ಕೆಲಸ ಮಾಡುತ್ತಿದ್ದು, ಅಂಗಡಿಗೆ ಹೊಂದಿಕೊಂಡಂತೆ ಇರುವ ಹಿಂಭಾಗದ ಕೊಠಡಿಯಲ್ಲಿ ವಾಸವಾಗಿದ್ದರು. ಅವರಿಬ್ಬರೂ ಮೂರು ದಶಕಗಳಿಂದ ಸಹಜೀವನ ನಡೆಸುತ್ತಿದ್ದರು. ಈ ವಿಚಾರ ರವೀಂದ್ರನ್ ಕುಟುಂಬ ಸದಸ್ಯರಿಗೂ ತಿಳಿದಿದೆ ಎಂದು ಪೊಲೀಸರು ಹೇಳಿದರು.
3-4 ದಿನಗಳ ಹಿಂದೆಯೇ ಘಟನೆ: ಕಳೆದ ಶುಕ್ರವಾರ ಅವರಿಬ್ಬರೂ ಅಂಗಡಿಯಲ್ಲಿ ಒಟ್ಟಿಗೆ ಇರುವುದನ್ನು ಸ್ಥಳೀಯರು ನೋಡಿದ್ದಾರೆ. ಅನಂತರ ಯಾರಿಗೂ ಕಾಣಿಸಿಕೊಂಡಿಲ್ಲ. ಹೀಗಾಗಿ ಘಟನೆ ನಾಲ್ಕು ದಿನಗಳ ಹಿಂದೆಯೇ ನಡೆದಿರುವ ಸಾಧ್ಯತೆಯಿದೆ. ಹಣಕಾಸಿನ ವಿಚಾರವಾಗಿ ಆತಂಕಗೊಂಡಿದ್ದ ರವೀಂದ್ರನ್ ಶುಕ್ರವಾರ ರಾತ್ರಿ ಅಂಗಡಿಯ ರೋಲಿಂಗ್ ಶೆಲ್ಟರ್ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಉಮಾರನ್ನು ಅವರ ಕೊಠಡಿಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದು, ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಸಂಜೆ ಅಂಗಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಕೂಡಲೇ “ನಮ್ಮ-100’ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ವಿವೇಕನಗರ ಠಾಣೆ ಹೊಯ್ಸಳ ಪೊಲೀಸರು ಅಂಗಡಿಯ ಶೆಲ್ಟರ್ ಬೀಗ ಮುರಿದು ಒಳ ಪ್ರವೇಶಿಸಿದಾಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಮನೆ ಮುಟ್ಟುಗೋಲು: 2006ರಲ್ಲಿ ಸಂಬಂಧಿಯೊಬ್ಬರು ರವೀಂದ್ರನ್ ಅವರ ಮನೆಯ ದಾಖಲೆ ಪಡೆದು ಬ್ಯಾಂಕ್‌ವೊಂದರಲ್ಲಿ 2 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ವಂಚಿಸಿದ್ದ ಸಂಬಂಧಿ ಇದುವರೆಗೂ ಬ್ಯಾಂಕಿಗೆ ಹಣ ಪಾವಿತಿಸಿಲ್ಲ. ಸದ್ಯ ಅವರು ವಿದೇಶದಲ್ಲಿ ವಾಸವಾಗಿದ್ದಾರೆ.
ಈ ನಡುವೆ ಕೋರ್ಟ್ ಅನುಮತಿ ಪಡೆದ ಬ್ಯಾಂಕ್ ಅಧಿಕಾರಿಗಳು 15ದಿನಗಳ ಹಿಂದೆ ಮನೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್‌ನ ಆದೇಶ ಪ್ರತಿ ಸಮೇತ ಬಂದಿದ್ದರು. ಇದರಿಂದ ಬೇಸರಗೊಂಡಿದ್ದ ರವಿಂದ್ರನ್ ಕಳೆದ 8-10 ದಿನಗಳಿಂದ ಅಂಗಡಿಯಲ್ಲೇ ಮಲಗುತ್ತಿದ್ದರು. ವಂಚನೆಯಿಂದ ನೊಂದು ರವೀಂದ್ರನ್ ಹೀಗೆ ಮಾಡಿಕೊಂಡಿರಬಹುದೆಂದು ಸಂಬಂಧಿಕರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.