ಮಹಾಲಿಂಗಪುರ: ತೆರಬಂಡಿ ಸ್ಪರ್ಧೆಯಲ್ಲಿ ಪ್ರತಿ ಬಾರಿ ಪ್ರಥಮ ಬಹುಮಾನ ಪಡೆಯುತ್ತ ಖ್ಯಾತಿ ಪಡೆದಿದ್ದ ಚಿಮ್ಮಡ ಗ್ರಾಮದ ಸೂರ್ಯ ಹೆಸರಿನ ಕಿಲಾರಿ ಎತ್ತು ದಾಖಲೆಯ 11.50 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಈ ಭಾಗದ ರೈತಾಪಿ ಜನರಲ್ಲಿ ಅಚ್ಚರಿ ಮೂಡಿಸಿದೆ.
ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಮುತ್ತಪ್ಪ ದೊಡಮನಿಯವರ ಮಕ್ಕಳಾದ ಶಿವಲಿಂಗಪ್ಪ, ಮಾಯಪ್ಪ ಸಹೋದರರು ಕಳೆದ ಆರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಚಗೇರಿ ಬಳಿಯ ಹೊರ್ತಿ ಜಾತ್ರೆಯಲ್ಲಿ 45 ಸಾವಿರ ರೂ. ಕೊಟ್ಟು ಈ ಎತ್ತನ್ನು ಖರೀದಿ ಮಾಡಿದ್ದರು.
ಆಗ ಬರೀ ಮೂರು ವರ್ಷ ತುಂಬಿದ ಸೂರ್ಯ ಎತ್ತನ್ನು ಆರು ವರ್ಷಗಳ ಕಾಲ ಪ್ರೀತಿಯಿಂದ ಜೋಪಾನ ಮಾಡಿ, ಕೃಷಿ ಚಟುವಟಿಕೆಗಳ ಜತೆಜತೆಗೆ ತೆರಬಂಡಿ ಸ್ಪರ್ಧೆಗಳಿಗೆ ತಾಲೀಮು ಕೊಡಿಸುವ ಮೂಲಕ ಈ ಭಾಗದಲ್ಲಿ ಮನೆಮಾತಾಗುವಂತೆ ಬೆಳೆಸಿದ್ದರು. ಈ ಎತ್ತಿನ ಕುರಿತ ಮಾಹಿತಿ ಪಡೆದಿದ್ದ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಸದಾಶಿವ ಡಂಗಿ ಎನ್ನುವವರು ಚಿಮ್ಮಡ ಗ್ರಾಮಕ್ಕೆ ಭೇಟಿ ನೀಡಿ, ಸೂರ್ಯ ಹೆಸರಿನ ಎತ್ತನ್ನು 11.50 ಲಕ್ಷ ರೂ.ಗಳಿಗೆ ಖರೀದಿ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಚಿಮ್ಮಡ ಗ್ರಾಮದಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಎತ್ತು ಮಾರಾಟ ಮಾಡಿದ ಹಿನ್ನಲೆಯಲ್ಲಿ ದೊಡಮನಿ ಸಹೋದರರು ಮಂಗಳವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಗ್ರಾಮದ ಪ್ರಮುಖರು, ಬಂಧು-ಮಿತ್ರರು ಸೇರಿ ಸುಮಾರು 600 ಜನರಿಗೆ ಸಿಹಿ ಊಟವನ್ನು ಹಾಕಿಸಿದರು.
ಕಳೆದ ಮೂರು ವರ್ಷಗಳ ಕಾಲ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಯ ವಿವಿಧೆಡೆ ನಡೆಯುವ ತೆರ ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸೂರ್ಯನಿಗೆ ಒಂದು ಬಹುಮಾನವಂತೂ ಫಿಕ್ಸ್ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ದಿ ಪಡೆದಿತ್ತು. ಈ ಅವಧಿಯಲ್ಲಿ ಸುಮರು 8 ಲಕ್ಷ ರೂ. ನಗದು ಹಣ, ಒಂದು ತೊಲೆ ಚಿನ್ನ, ಅರ್ಧ ಕಿಲೋ ಬೆಳ್ಳಿ, ಹೀರೋ ಹೊಂಡಾ ಬೈಕ್ ಸೇರಿದಂತೆ ಹಲವಾರು ಬಹುಮಾನ ಗೆದ್ದು ತಂದಿದ್ದಾನೆ. ಇದೀಗ ಸೂರ್ಯನ ಜತೆ ಅದಕ್ಕೆ ತಕ್ಕಂತೆ ಸಾಥ್ ನೀಡುವ ಎತ್ತು ಇಲ್ಲದ ಕಾರಣ ಸೂರ್ಯನನ್ನು ಮಾರಾಟ ಮಾಡಿದ್ದಾಗಿ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಹೇಳುತ್ತಾರೆ.
ನಮ್ಮ ಮನೆಯಲ್ಲಿ 9 ಲಕ್ಷ ರೂ. ಕೊಟ್ಟು ಖರೀದಿಸಿ ತಂದ ತೆರಬಂಡಿ ಎಳೆಯುವ ಒಂಟಿ ಎತ್ತು ಇದ್ದು ಅದಕ್ಕೆ ಜತೆಯಾಗುವ ಎತ್ತನ್ನು ಹುಡುಕುತಿದ್ದಾಗ ತೆರಬಂಡಿ ಜಗ್ಗುವುದರಲ್ಲಿ ಈ ಭಾಗದಲ್ಲಿ ಫೇಮಸ್ ಆಗಿರುವ ಸೂರ್ಯ ಎತ್ತು ಚಿಮ್ಮಡದಲ್ಲಿ ಇರುವುದು ಗೊತ್ತಾಯಿತು ಅದನ್ನು ನಾವು ದೊಡಮನಿ ಸಹೋದರರಿಂದ 11.50 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದೇವೆ.
ಸದಾಶಿವ ಡಂಗಿ, ಇಟ್ನಾಳ. ಎತ್ತು ಖರೀದಿಸಿದವರು