Advertisement

ಕೀವ್‌ ಉಕ್ರೇನ್‌ನ ಅತ್ಯಂತ ಸುಂದರ ನಗರ

12:11 AM Feb 27, 2022 | Team Udayavani |

ಉಕ್ರೇನ್‌ನ ಅತ್ಯಂತ ಸುಂದರ ನಗರವಿದು. ಒಂದು ಸಾವಿರ ವರ್ಷಗಳ ಹಿಂದೆಯೇ ಈ ನಗರವನ್ನು ಮದರ್‌ ಆಫ್ ರಸ್‌ ಸಿಟೀಸ್‌ ಎಂದೇ ಕರೆಯಲಾಗುತ್ತಿತ್ತು. ಪಕ್ಕದಲ್ಲೇ ಡ್ನೀಪರ್ ಎಂಬ ನದಿ ಹರಿಯುತ್ತಿದ್ದು, ಇದಕ್ಕೆ ಹೊಂದಿಕೊಂಡಂತೆ ಒಂದು ಬಂದರು ಕೂಡ ಇದೆ.  ಅತ್ಯಂತ ಹೆಮ್ಮೆಯ ಇತಿಹಾಸ ಹೊಂದಿರುವ ಈ ನಗರಕ್ಕೆ ಎರಡನೇ ಮಹಾಯುದ್ಧದ ವೇಳೆ ಭಾರೀ ಪ್ರಮಾಣದ ಹಾನಿಯುಂಟಾಗಿತ್ತು.

Advertisement

ಆದರೆ 1950ರ ಮಧ್ಯಭಾಗದ ಹೊತ್ತಿಗೆ ಈ ನಗರ ಸುಧಾರಿಸಿಕೊಂಡಿತು. ಈಗ ಇದು ಅತ್ಯಂತ ಸುಸಜ್ಜಿತ ಮತ್ತು ಅಭಿವೃದ್ಧಿ ಹೊಂದಿದ ನಗರವೆಂದೇ ಖ್ಯಾತಿ ಪಡೆದುಕೊಂಡಿದೆ. 780 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಈ ನಗರವನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಎರಡನೇ ಮಹಾಯುದ್ಧದ ಬಳಿಕವೇ ಈ ನಗರವನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಲಾಗಿದ್ದರೂ ಹಳೆಯ ಸಾಂಪ್ರದಾಯಿಕ ಶೈಲಿಯನ್ನು ಹಾಗೆಯೇ ಉಳಿಸಿಕೊಂಡಿದೆ.

ಉಕ್ರೇನ್‌ ರಾಜಧಾನಿಯಾಗಿರುವ ಕೀವ್‌ ನಗರದಲ್ಲಿ ಕೈಗಾರಿಕೆಗಳಿಗೆ ಯಾವುದೇ ಕೊರತೆ ಇಲ್ಲ. ಇಡೀ ಭಾಗದ ಎಲ್ಲೆ ಕಡೆಗಳಲ್ಲೂ ಕೈಗಾರಿಕೆಗಳು ಕಾಣಿಸುತ್ತವೆ. ಉಕ್ಕು, ಕಬ್ಬಿಣ ಕಾರ್ಖಾನೆಗಳು, ರಸಗೊಬ್ಬರ, ಮೆಷಿನರಿ, ಕೆಮಿಕಲ್‌ ವರ್ಕ್‌, ರಬ್ಬರ್‌ ಸೇರಿದಂತೆ ಹಲವಾರು ರೀತಿಯ ಉತ್ಪಾದನ ಕಾರ್ಖಾನೆಗಳಿವೆ.

ಈ ನಗರದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಇದೆ. ಹೆಚ್ಚಾಗಿ ಕೈಗಾರಿಕೆಗಳು ಇರುವುದರಿಂದ, ನಗರದ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಂಚರಿಸಲು ಉತ್ತಮವಾದ ವ್ಯವಸ್ಥೆಯನ್ನೇ ಮಾಡಲಾಗಿದೆ. ಅಲ್ಲದೆ ಎಲ್ಲ ವಾತಾವರಣದಲ್ಲೂ ಓಡಾಡಬಲ್ಲ ರಸ್ತೆಗಳೂ ಇವೆ.

ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯೂ ಉತ್ತಮವಾಗಿದ್ದು, ತನ್ನ ಹಳೆಯ ಸಂಪ್ರದಾಯವನ್ನು ಉಳಿಸುವ ದೃಷ್ಟಿಯಿಂದ ನಾಟಕಗಳ ಮೂಲಕ ಇತಿಹಾಸವನ್ನು ಪ್ರದರ್ಶಿಸಲಾಗುತ್ತಿದೆ.

Advertisement

ಯಹೂದಿಗಳ ಹತ್ಯೆ
1941ರ ಸೆ.19ರಂದು ಈ ನಗರಕ್ಕೆ ಹಿಟ್ಲರ್‌ ಪಡೆ ಕಾಲಿಟ್ಟಿತ್ತು. ಇದಾದ ಕೆಲವೇ ದಿನಗಳಲ್ಲಿ 34 ಸಾವಿರ ಯಹೂದಿಗಳನ್ನು ನಾಜಿಗಳು ಹತ್ಯೆ  ಮಾಡಿದ್ದರು. ಅಷ್ಟೇ ಅಲ್ಲ, ಅನಂತರದ ಎರಡು ವರ್ಷಗಳಲ್ಲಿ  10 ಸಾವಿರಕ್ಕೂ ಹೆಚ್ಚು ಯಹೂದಿಗಳು, ರೋಮಾ ಮತ್ತು ಇತರ ಉಕ್ರೇನಿಯನ್ನರನ್ನೂ ನಾಜಿಗಳು ಹತ್ಯೆ ಮಾಡಿದ್ದರು. 1943ರ ನ.6ರಂದು ರಷ್ಯಾ ಸೇನೆ, ಜರ್ಮನ್‌ ಸೈನಿಕರನ್ನು ಇಲ್ಲಿಂದ ಓಡಿಸಿ ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಈ ಯುದ್ಧದ ವೇಳೆ ನಗರದ ಶೇ.40ರಷ್ಟು ಕಟ್ಟಡಗಳು ಬಿದ್ದು ಹೋಗಿದ್ದವು.  ಒಂದು ಕಾಲದಲ್ಲಿ ರಷ್ಯಾವೇ ಉಳಿಸಿದ್ದ ಈ ನಗರದ ಮೇಲೆ ಈಗ ಅದೇ ರಷ್ಯನ್ನರು ದಾಳಿ ಮಾಡಿದ್ದಾರೆ. ಈಗಾಗಲೇ ಹಲವಾರು ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next