ಹೈದರಾಬಾದ್: ತನ್ನ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ಬೀಗುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂಬೈ ಇಂಡಿಯನ್ಸ್ ಸರಿಯಾದ ಹೊಡೆತ ನೀಡಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ತಂಡ 40 ರನ್ ಗಳ ಅಂತರದಿಂದ ಗೆದ್ದು ಮೆರೆದಾಡಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭುವನೇಶ್ವರ್ ಕುಮಾರ್ ನಿರೀಕ್ಷೆಯಂತೆ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ನಾಯಕನ ಆಯ್ಕೆಯನ್ನು ಸಮರ್ಥಿಸುವಂತೆ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಮುಂಬೈ ನಾಯಕ ರೋಹಿತ್, ಕೀಪರ್ ಡಿಕಾಕ್, ಸೂರ್ಯಕೂಮಾರ್ ಯಾದವ್, ಯುವರಾಜ್ ಬದಲು ಸ್ಥಾನ ಪಡೆದ ಇಶಾನ್ ಕಿಶಾನ್, ಪಾಂಡ್ಯಾ ಸಹೋದರರ‍್ಯಾರು ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು. ನಿರಂತರ ವಿಕೆಟ್ ಕಳೆದುಕೊಂಡ ಮುಂಬೈ ರನ್ ಪೇರಸಲು ಪರದಾಡಿತು.
ಅಬ್ಬರಿಸಿದ ಪೊಲಾರ್ಡ್: ಒಂದು ಹಂತದಲ್ಲಿ 18 ಓವರ್ ನಲ್ಲಿ ಕೇವಲ 97 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್ 120 ರನ್ ಗಳಿಸುವುದು ಕಷ್ಟವಾಗಿತ್ತು. ಆದರೆ ನಂತರ ನಡೆದದ್ದು ಕೆರಿಬಿಯನ್ ದೈತ್ಯ ಕೈರನ್ ಪೊಲಾರ್ಡ್ ಬ್ಯಾಟಿಂಗ್ ವೈಭವ. ಕೊನೆಯ ಎರಡು ಓವರ್ ನಲ್ಲಿ39 ರನ್ ಚಚ್ಚಿದ ಪೊಲಾರ್ಡ್ ನಾಲ್ಕು ಸಿಕ್ಸರ್ ಸಹಿತ 46 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಹೈದರಾಬಾದ್ ಗೆ 137 ರನ್ ಗಳ ಗುರಿ ನೀಡಿತು.
ಜೋಸೆಫ್ ಜಬರ್ದಸ್ತ್ ಬೌಲಿಂಗ್: ಈ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಹೈದರಾಬಾದ್ ಗೆ ಮುಂಬೈ ನೀಡಿದ 137 ರನ್ ದೊಡ್ಡದೇನಾಗಿರಲಿಲ್ಲ. ತಂಡದ ಮೊತ್ತ 33 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಯಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ವಿಜಯ ಶಂಕರ್, ಮನೀಶ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾನ್, ಮೊಹಮ್ಮದ್ ನಬೀ, ಹೀಗೆ ಯಾರೋಬ್ಬರೂ ನಿಂತು ಆಡುವ ಧೈರ್ಯ ತೋರಲಿಲ್ಲ.
ತನ್ನ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಅಲ್ಜಾರಿ ಜೋಸೆಫ್ ಕೇವಲ 12 ರನ್ ನೀಡಿ ಆರು ವಿಕೆಟ್ ಕಿತ್ತು ಹೈದರಾಬಾದ್ ತಂಡದ ಯೊಜನೆಗಳನ್ನು ಬುಡಮೇಲು ಮಾಡಿದರು. ಅಂತಿಮವಾಗಿ ಕೇವಲ 96 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಹೈದರಾಬಾದ್ 40 ರನ್ ಗಳಿಂದ ಸೋಲೊಪ್ಪಿತು. ತನ್ನ ಅದ್ಭುತ ಬೌಲಿಂಗ್ ದಾಳಿಯಿಂದಾಗಿ ಮುಂಬೈ ಗೆಲುವಿಗೆ ಕಾರಣರಾದ ಜೋಸೆಫ್ ಪಂದ್ಯಪುರುಷ ಪ್ರಶಸ್ತಿ ಪಡೆದರು.