Advertisement

ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಗೆ ಶೀಘ್ರ ಶಂಕು

06:26 PM Apr 03, 2022 | Team Udayavani |

ಬೆಳಗಾವಿ: ನಗರದ ವಡಗಾವಿಯ ನಾಲ್ಕು ಎಕರೆ ಜಾಗದಲ್ಲಿ 130 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ ಆರಂಭಿಸಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸುವರು ಎಂದು ಬೆಂಗಳೂರು ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ ನಿರ್ದೇಶಕ ಡಾ. ಸಿ. ರಾಮಚಂದ್ರ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ. ತುಮಕೂರು, ಶಿವಮೊಗ್ಗ, ಮೈಸೂರಿನಲ್ಲಿ ಕೇಂದ್ರ ಆರಂಭಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಮುತುವರ್ಜಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಬೆಳಗಾವಿಗೆ ಕ್ಯಾನ್ಸರ್‌ ಸಂಸ್ಥೆ ಮಂಜೂರು ಮಾಡಿದ್ದಾರೆ ಎಂದರು.

ಬೆಳಗಾವಿಯಲ್ಲಿ ಸದ್ಯಕ್ಕೆ ನೂರು ಹಾಸಿಗೆ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಕಿದ್ವಾಯಿ ಕ್ಯಾನ್ಸರ್‌ ಕೇಂದ್ರದ ಮಾದರಿಯಲ್ಲಿ ಪ್ರತಿಯೊಂದು ಚಿಕಿತ್ಸೆ ಇಲ್ಲಿ ಲಭ್ಯವಾಗಲಿದೆ. ಎಲ್ಲ ಬಗೆಯ ವಿಭಾಗಗಳನ್ನು ಆರಂಭಿಸಲಾಗುವುದು. ಇದಲ್ಲದೇ ಸಂಶೋಧನಾ ಕೇಂದ್ರವನ್ನೂ ಆರಂಭಿಸುವ ಬಗ್ಗೆ ಚಿಂತನೆಯಿದೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆ ವಿಸ್ತರಣೆಗೆ ಅನುಕೂಲವಾಗುವಂತೆ ಜಾಗವನ್ನು ಗುರುತಿಸಲಾಗಿದೆ ಎಂದರು.

ಕ್ಯಾನ್ಸರ್‌ ರೋಗ ದಿನೆ ದಿನೇ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸುಸಜ್ಜಿತ ಮೊಬೈಲ್‌ ಘಟಕದ ಮೂಲಕ ಕ್ಯಾನ್ಸರ್‌ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ಆರಂಭದಿಂದ ಸುತ್ತಮುತ್ತಲಿನ ಏಳು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಇದಲ್ಲದೇ ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ನೆರೆಯ ರಾಜ್ಯಗಳ ಜನರಿಗೂ ಇದರಿಂದ ಪ್ರಯೋಜನ ಆಗಲಿದೆ. 130 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಆರಂಭಗೊಂಡ ಬಳಿಕ ಯಾವುದೇ ರೀತಿಯ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ನಿರಂತರ ಪ್ರಯತ್ನ ಮುಂದುವರಿಸಲಾಗುವುದು. ಆರೋಗ್ಯ ಕ್ಷೇತ್ರದ ಬೆಳವಣಿಗೆಯಿಂದ ಶಿಕ್ಷಣ ಮತ್ತು ವ್ಯಾಪಾರಕ್ಕೆ ಕೂಡ ಅನುಕೂಲವಾಗಲಿದೆ ಎಂದರು.

Advertisement

ಈ ಭಾಗಕ್ಕೆ ಆಸ್ಪತ್ರೆ ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್‌ ಘಟಕವನ್ನೂ ಆರಂಭಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಾಲಕೃಷ್ಣ ತುಕ್ಕಾರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next