Advertisement
ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೆಚ್ಚಿನ ಪ್ರಕರಣಗಳಲ್ಲಿ ಜೀವವನ್ನು ಉಳಿಸಲು ಮೂತ್ರಪಿಂಡ-ಕಸಿ ಒಂದೇ ಆಯ್ಕೆ ಎಂದು ಭಾವಿಸಲಾಗುತ್ತದೆ. ಆದರೆ ಮೂತ್ರಪಿಂಡ ಕಸಿ ಅನ್ನುವುದು ಅನೇಕ ಸಂದರ್ಭಗಳಲ್ಲಿ ದಾನದ ಪ್ರಕ್ರಿಯೆ ಆಗಿರುವ ಕಾರಣ, ಅಂಗಾಂಗ ಕಸಿಗಾಗಿ ಕಾದಿರುವ ಎಲ್ಲರಿಗೂ ಈ ಚಿಕಿತ್ಸಾ ಆಯ್ಕೆ ಲಭ್ಯವಾಗುತ್ತದೆ ಎಂದು ಹೇಳುವುದು ಅಸಾಧ್ಯ. ಮೂತ್ರಪಿಂಡದ ಕಸಿ ಮಾಡುವಾಗ ದಾನಿ ಮತ್ತು ಪಡೆಯುವಾತ ಇಬ್ಬರ ಅಂಗಾಂಶಗಳ ನಡುವೆ ಹ್ಯೂಮನ್ ಲ್ಯೂಕೋಸೈಟ್ಸ್ ಆಂಟಿಜೆನ್ ಟೈಪಿಂಗ್ (HLAT)) ಹೊಂದಾಣಿಕೆ ಇರಬೇಕಾಗುವುದು. ದೀರ್ಘಕಾಲಿಕ ಮೂತ್ರಪಿಂಡದ ಕಾಯಿಲೆ ಇದ್ದು, ದಾನಿಗಾಗಿ ಕಾಯುತ್ತಿರುವ ರೋಗಿಗಳಿಗೆ ಮೂತ್ರಪಿಂಡದ ಇನ್ನಿತರ ರೀತಿಯ ಬದಲಿ ಚಿಕಿತ್ಸೆಗಳು (RRT) ರೋಗಿಯ ಜೀವ-ನಿರ್ವಹಣೆಗೆ ಸಹಕಾರಿ ಎನಿಸಬಹುದು.
ಮೂತ್ರಪಿಂಡ ಲಭ್ಯವಿಲ್ಲದಿರುವಿಕೆ ಮತ್ತು ಅದರ ಚಿಕಿತ್ಸೆಯು ಒಳಗೊಂಡಿರುವ ತೊಡಕುಗಳು ಜಗತ್ತಿನಾದ್ಯಂತ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಬೆಳೆದಿರುವುದರ ಜತೆಗೆ, ಇಂದು ಮೂತ್ರಪಿಂಡದ ಕಾರ್ಯಚಟುವಟಿಕೆಯ ನ್ಯೂನತೆಯಿಂದ ಬಳಲುತ್ತಿರುವ ಯುವ ರೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿರುವುದು ಒಂದು ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಹೊರೆ ಎನಿಸಿಕೊಂಡಿದೆ.
Related Articles
ರೋಗಿಯ ಆರೋಗ್ಯ ಸಂಬಂಧಿಸಿದ ಹಾಗೆ ಇದು ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ ಅಂದರೆ ರೋಗಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಚಟುವಟಿಕೆ ಮತ್ತು ಒಟ್ಟಾರೆ ಯೋಗಕ್ಷೇಮ ಇತ್ಯಾದಿ ಅನೇಕ ವಿಚಾರಗಳನ್ನು ಇದು ಒಳಗೊಂಡಿರುತ್ತದೆ. ವಿವಿಧ ಕಾಯಿಲೆಗಳಲ್ಲಿ ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆತನ ಜೀವನ ಗುಣಮಟ್ಟವೂ ಸಹ ಬಹುಮುಖ್ಯ ಅಂಶ ಎಂಬುದನ್ನು ಅನೇಕ ಕ್ಲಿನಿಕಲ್ ಟ್ರಯಲ್‌ಗಳು ಒತ್ತಿ ಹೇಳುತ್ತವೆ.
ಮೂತ್ರಪಿಂಡ ಕಸಿ ಎನ್ನುವುದು ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯಿಂದ (ESRD) ಬಳಲುತ್ತಿರುವವರಿಗೆ ಒಂದು ಚಿಕಿತ್ಸಾ ಆಯ್ಕೆ ಆಗಿರುತ್ತದೆ. ಕಳೆದ ಒಂದು ದಶಕದಿಂದ ಈಚೆಗೆ ಮೂತ್ರಪಿಂಡದ ಕಸಿ ಪ್ರಕ್ರಿಯೆಯಲ್ಲಿ ಮತ್ತು ಇಮ್ಯುನೋಸಪ್ರಸಿವ್ ಚಿಕಿತ್ಸೆಗಳಲ್ಲಿ ಆಗಿರುವ ಸುಧಾರಣೆಗಳ ಕಾರಣದಿಂದ ರೋಗಿಗಳ ಜೀವಿತಾವಧಿಯು ಗಮನಾರ್ಹವಾಗಿ ಹೆಚ್ಚಾಗಿದೆ. ಅಲ್ಲೋಗ್ರಾಫ್ಟ್ನ (allograft) ಬದುಕುಳಿಯುವ ವಾರ್ಷಿಕ ದರವು ಪ್ರಸ್ತುತ 90% ಗಿಂತಲು ಹೆಚ್ಚು.
ಕಾಯಿಲೆಯ ಪರಿಣಾಮಗಳನ್ನು ತಗ್ಗಿಸಿ ರೋಗಿಯ ಜೀವನ ಗುಣಮಟ್ಟ ಮತ್ತು ಜೀವಿತಾವಧಿಯನ್ನು ಹೆಚ್ಚಿಸುವುದು ಮೂತ್ರಪಿಂಡ ಕಸಿ ಪ್ರಕ್ರಿಯೆಯ ಬಹುಮುಖ್ಯ ಉದ್ದೇಶ. ಮೂತ್ರಪಿಂಡದ ಕಸಿಯ ವೆಚ್ಚ ಅಷ್ಟೇ ಅಲ್ಲ ಇದು ಒಳಗೊಂಡಿರುವ ಅಡ್ಡ ಪರಿಣಾಮಗಳ ಚಿಕಿತ್ಸೆಯ ವೆಚ್ಚವೂ ಸಹ ಈ ಪ್ರಕ್ರಿಯೆಯ ಸಾಧ್ಯತೆಗೆ ಅಡ್ಡಿ ಉಂಟುಮಾಡುವ ಬಹು ದೊಡ್ಡ ಕಾರಣ. ಇದರಲ್ಲಿ ಒಳಗೊಂಡಿರುವ ಒಂದು ವಿಶೇಷ ವೆಚ್ಚದ ಚಿಕಿತ್ಸೆ ಅಂದರೆ ಇಮ್ಯುನೋಸಪ್ರಸಿವ್ ಚಿಕಿತ್ಸೆ.
Advertisement
ಮೊತ್ತ ಮೊದಲನೆ ಮೂತ್ರಪಿಂಡ ಕಸಿ ಪ್ರಕ್ರಿಯೆಯಾದ 1950ರ ಆರಂಭದಿಂದ ತೊಡಗಿ ಇದುವರೆಗೆ ಇಮ್ಯುನೋಸಪ್ರಸಿವ್ ಚಿಕಿತ್ಸೆಯಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ. ಇದರಲ್ಲಿ ಆದ ಬಹು ಮುಖ್ಯ ಕ್ರಾಂತಿಕಾರಿ ಸುಧಾರಣೆ ಅಂದರೆ 1980ರ ಆದಿಯಲ್ಲಿ ಸೈಕ್ಲೋಸ್ಫೋರಿನ್ ಪರಿಚಯವಾದುದು. ಹೊಸ ಇಮ್ಯುನೋಸಪ್ರಸಿವ್ ಔಷಧಿಗಳ ಪರಿಚಯವು ಮೂತ್ರಪಿಂಡ ಕಸಿಯ ರೋಗಿಗಳಲ್ಲಿ ಇಮ್ಯುನೋಸಪ್ರಸಿವ್ ಸಂಯೋಜನೆಯ ಚಿಕಿತ್ಸಾ ಆಯ್ಕೆಗಳ ವ್ಯಾಪಕತೆಯನ್ನು ಇನ್ನಷ್ಟು ಹೆಚ್ಚಿಸಿತು.
ಇದಕ್ಕೆ ಪೂರಕವಾಗಿ ರೋಗಿಯ ಉತ್ತಮ ಆರೈಕೆ ಮತ್ತು ಹೊಸ ಇಮ್ಯುನೋಸಪ್ರಸಿವ್ ಕ್ರಮದಿಂದಾಗಿ ಮೂತ್ರಪಿಂಡದ ಅಲ್ಲೋಗ್ರಾಫ್ಟ್ ಬದುಕುಳಿಯುವಿಕೆಯು ನಿರಂತರವಾಗಿ ಹೆಚ್ಚಾಯಿತು. ಈ ಸಾಧನೆಗಳ ಜೊತೆ-ಜೊತೆಯಾಗಿ ದೀರ್ಘಾವಧಿಯ ಜೀವನ ಗುಣಮಟ್ಟಕ್ಕೂ ಸಹ ಹೆಚ್ಚಿನ ಗಮನವನ್ನು ನೀಡಲಾಯಿತು. ಒಟ್ಟಾರೆಯಾಗಿ ಗಳಿಸಿದ ಅಥವಾ ಸಾಧಿಸಿದ ಗಮನಾರ್ಹ ಅಂಶ ಅಂದರೆ ಡಯಾಲಿಸಿಸ್‌ನಲ್ಲಿರುವ ರೋಗಿಗಿಂತಲೂ ಮೂತ್ರಪಿಂಡದ ಕಸಿ ಮಾಡಿಸಿಕೊಂಡ ರೋಗಿಯಲ್ಲಿ ಕಸಿ ಅಂಗಾಂಶದ ಸಕ್ರಿಯ ಕಾರ್ಯ ಚಟುವಟಿಕೆಯ ಕಾರಣದಿಂದಾಗಿ ಜೀವನ ಗುಣಮಟ್ಟದಲ್ಲಿ ಸುಧಾರಣೆ ಆದುದು.
ಸಾರಾಂಶಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯ ಜಾಗತಿಕ ಹೊರೆಯು ಹೆಚ್ಚಾಗಿದೆ. ಮೂತ್ರಪಿಂಡದ ಕಸಿಯಿಂದಾಗಿ ರೋಗಿಗಳ ಜೀವಿತಾವಧಿ ಮತ್ತು ಜೀವನ ಗುಣಮಟ್ಟ ಹೆಚ್ಚಾಗಿದೆ ಮತ್ತು ಅಂತಿಮಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಆರೈಕೆಯ ವೆಚ್ಚವು ಕಡಿಮೆ ಆಗಿದೆ. ಮೂತ್ರಪಿಂಡದ ಕಸಿಯಿಂದಾಗಿ ರೋಗಿಯ ಆಯುಷ್ಯ ವೃದ್ಧಿಯಾಗಿದೆ, ಅಂದರೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಿಂತಲೂ ಕಸಿ ಪ್ರಕ್ರಿಯೆಗೆ ಒಳಪಡುವ ರೋಗಿಯು ಸಾಮಾನ್ಯವಾಗಿ ಹೆಚ್ಚು ಸಮಯ ಬದುಕುತ್ತಾನೆ. ಅಂದರೆ ಒಬ್ಬ ಜೀವಂತ ವ್ಯಕ್ತಿಯಿಂದ ಮೂತ್ರಪಿಂಡವನ್ನು ದಾನವಾಗಿ ಪಡೆದವರು ಸುಮಾರು 12 ರಿಂದ 20 ವರ್ಷ ಬದುಕಿದರೆ ಮೂತ್ರಪಿಂಡವನ್ನು ದಾನವಾಗಿ ಪಡೆದವರ ಜೀವಿತಾವಧಿ 8-12 ವರ್ಷಗಳಷ್ಟು ವೃದ್ಧಿಯಾಗಿದೆ. ಮೂತ್ರಪಿಂಡ ಕಸಿಯ ಹೆಚ್ಚಿನ ಮೂತ್ರಪಿಂಡಗಳು ಲಭಿಸುವುದು ಮೆದುಳು ಮೃತಪಟ್ಟಿರುವ ಅಥವಾ ಹೃದಯವು ಮರಣ ಹೊಂದಿರುವ ವ್ಯಕ್ತಿಯಿಂದ. ಆದರೆ ಇದೀಗ ಜೀವಂತ ವ್ಯಕ್ತಿಗಳಿಂದ ದಾನವಾಗಿ ಬರುವ ಮೂತ್ರಪಿಂಡಗಳ ಸಂಖ್ಯೆಯು ಸಹ ಹೆಚ್ಚಾಗುತ್ತಿದೆ. ಅಲ್ಲೋಗ್ರಾಫ್ಟ್ ಸುಧಾರಣೆ ಮತ್ತು ರೋಗಿಯು ಜೀವಿತಾವಧಿಯನ್ನು ಹೆಚ್ಚಿಸುವ ದೃಷ್ಟಿಯಿಂದ ನೋಡುವುದಾದರೆ, ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ, ಜೀವಂತ ವ್ಯಕ್ತಿಯಿಂದ ಪಡೆದ ಮೂತ್ರಪಿಂಡವನ್ನು ಕಸಿ ಮಾಡುವುದು ಬಹಳ ಉತ್ತಮ ಆಯ್ಕೆ ಎನಿಸಿಕೊಳ್ಳುತ್ತದೆ. ಮೂತ್ರಪಿಂಡ ಕಸಿಯಿಂದ ಸಿಗುವ ದೀರ್ಘಕಾಲಿಕ ಪ್ರಯೋಜನಗಳಲ್ಲಿಯೂ ಸುಧಾರಣೆ ಆಗಿದೆ. ಜೀವನ ಗುಣಮಟ್ಟ ಸುಧಾರಣೆ ಅಗಿದೆ. ಮೂತ್ರಪಿಂಡದ ಕಸಿ ಅನ್ನುವುದು ದೊಡ್ಡ ಶಸ್ತ್ರ ಚಿಕಿತ್ಸೆ ಆಗಿದ್ದರೂ ಸಹ , ಡಯಾಲಿಸಿಸ್‌ಗೆ ಹೋಲಿಕೆ ಮಾಡಿದರೆ ಇದು ರೋಗಿಗೆ ದೀರ್ಘಾವಧಿಯ ಸಂತೃಪ್ತ ಜೀವನವನ್ನು ಕೊಡಬಲ್ಲದು. ಈ ಹಿಂದೆ ಡಯಾಲಿಸಿಸ್‌ನಲ್ಲಿ ಇದ್ದು ಆ ಬಳಿಕ ಕಸಿ ಮಾಡಿಸಿಕೊಂಡ ಅನೇಕ ರೋಗಿಗಳು, ಕಡಿಮೆ ಆಹಾರ ಪಥ್ಯದೊಂದಿಗೆ ಮತ್ತು ಕಸಿಯ ಕೆಲವೇ ಕೆಲವು ತೊಂದರೆಗಳ ಜೊತೆಗೆ ಹೆಚ್ಚು ಚೈತನ್ಯಶಾಲಿ ಜೀವನವನ್ನು ನಡೆಸುತ್ತಿದ್ದಾರೆ. ಡಯಾಲಿಸಿಸ್ ರೀತಿಯಲ್ಲಿ ಅಲ್ಲದೆ, ಕಸಿ ಮಾಡಿಸಿಕೊಂಡ ವ್ಯಕ್ತಿಗಳು ಈ ಪ್ರಕ್ರಿಯೆಯ ಬಳಿಕ ಮತ್ತೆ ತಮ್ಮ ಕೆಲಸಕ್ಕೆ ಮರಳ ಬಹುದಾಗಿದೆ. ಪ್ರಿಮಿಟಿವ್ ಟ್ರಾನ್ಸ್‌ಪ್ಲಾಂಟೇಷನ್ ಅಂದರೆ ರೋಗಿಗೆ ಡಯಾಲಿಸಿಸ್ ಆರಂಭಿಸುವ ಮೊದಲೆ ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳುವುದು ಎಂದು. ಇಲ್ಲಿ ವ್ಯಕ್ತಿಯ ಆರೋಗ್ಯವು ಸಾಮಾನ್ಯವಾಗಿ ಉತ್ತಮವಾಗಿಯೇ ಇರುವಾಗ ರೋಗಿಯು ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳುತ್ತಾನೆ. ಇದರಿಂದಾಗಿ ಆತನ ಹೊಸ ಮೂತ್ರಪಿಂಡದ ಚಟುವಟಿಕೆ ಉತ್ತಮಗೊಳ್ಳುತ್ತದೆ ಮತ್ತು ಆತನ ಒಟ್ಟಾರೆ ಆರೋಗ್ಯ ಮತ್ತು ಜೀವನದ ನಿರೀಕ್ಷೆಗಳನ್ನೂ ಸಹ ಉತ್ತಮ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಳೆದ ದಶಕದಲ್ಲಿ ಮೂತ್ರಪಿಂಡದ ವೈಫಲ್ಯದ ಕಾರಣದಿಂದಾಗಿ ಬದಲಿ ಮೂತ್ರಪಿಂಡದ ಚಿಕಿತ್ಸೆಯನ್ನು ಪಡೆದುಕೊಂಡವರ ಸಂಖ್ಯೆಯೂ 1.4 ದಶಲಕ್ಷಕ್ಕೂ ಹೆಚ್ಚು ಎಂಬುದಾಗಿ ಜಾಗತಿಕ ದತ್ತಾಂಶಗಳು ಹೇಳುತ್ತವೆ. ಈ ಅಂಕಿ ಅಂಶವು ಪ್ರತೀ ವರ್ಷ ಸುಮಾರು 8% ನಷ್ಟು ಹೆಚ್ಚಾಗುತ್ತಿದೆ.
ಡಯಾಬೆಟಿಕ್ ನೆಫೊÅàಪತಿ ಮತ್ತು ಮೂತ್ರಪಿಂಡ ಕಾಯಿಲೆ ಇರುವ ಕೆಲವು ಮಕ್ಕಳಿಗೆ ಕಸಿಯು ಒಂದು ಆಯ್ಕೆಯ ಚಿಕಿತ್ಸೆ ಆಗಬಹುದು. – ಮುಂದಿನ ವಾರಕ್ಕೆ – ಡಾ| ಶಶಾಂತ್ ಕುಮಾರ್,
ಕನ್ಸ್‌ಲ್ಟಂಟ್ ನೆಫ್ರಾಲಾಜಿಸ್ಟ್,
ಮೂತ್ರಪಿಂಡಗಳ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಮಂಗಳೂರು.