Advertisement

ಮೂತ್ರಪಿಂಡದ ಕಲ್ಲುಗಳು

06:18 PM Mar 30, 2019 | Sriram |

ಪಾನೀಯ ಸೇವನೆ
ಮೂತ್ರಪಿಂಡದ ಕಲ್ಲುಗಳ ಕಾಯಿಲೆ ಇರುವ ರೋಗಿಯು ಹೆಚ್ಚು ಹೆಚ್ಚು ದ್ರವಾಹಾರ ಸೇವಿಸಿ ದಿನಕ್ಕೆ 2 ಲೀಟರ್‌ಗಿಂತಲೂ ಹೆಚ್ಚು ಮೂತ್ರ ವಿಸರ್ಜನೆ ಆಗುವಂತೆ ನೋಡಿಕೊಳ್ಳೂವುದು ಸಂರಕ್ಷಣಾ ಚಿಕಿತ್ಸೆಯ ಬಹುಮುಖ್ಯ ಅಂಶ. ಮದ್ಯಸಾರಯುಕ್ತ (ಅಲ್ಕೋಹಾಲಿಕ್‌) ಪಾನೀಯಗಳು, ಚಹಾ, ಕಾಫಿ, ವೈನ್‌ ಮತ್ತು ಕಿತ್ತಲೆ ಹಣ್ಣಿನ ರಸ ಸೇವನೆಗೂ ಮೂತ್ರಪಿಂಡದ ಕಲ್ಲುಗಳ ಉತ್ಪಾದನೆಯ ಅಪಾಯ ತಗ್ಗುವುದಕ್ಕೂ ಮತ್ತು ಸಿಹಿ ಪಾನೀಯಗಳಿಗೂ ಹಾಗೂ ಮೂತ್ರಪಿಂಡದ ಕಲ್ಲುಗಳ ಉತ್ಪಾದನೆಯ ಅಪಾಯ ಹೆಚ್ಚಾಗುವುದಕ್ಕೂ ಸಂಬಂಧವಿದೆ. ಮೂತ್ರದ ಪ್ರಮಾಣವು ಹೆಚ್ಚು ಇದ್ದರೆ ಸುಪರ್‌ ಸ್ಯಾಚುರೇಷನ್‌ ಮತ್ತು ಪ್ರಸಿಪಿಟೇಷನ್‌ ಪ್ರಕ್ರಿಯೆಯಿಂದಾಗಿ ಕ್ಯಾಲ್ಸಿಯಂ ಆಕ್ಸಾಲೆಟ್‌ ಕಲ್ಲುಗಳ ಉತ್ಪಾದನೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಈ ಪರಿಸ್ಥಿತಿಯಲ್ಲಿ ಇರುವ ರೋಗಿಗೆ ರಾತ್ರಿ ಸಮಯದಲ್ಲಿ ಹೆಚ್ಚು ನೀರನ್ನು ಸೇವಿಸುವಂತೆ ಸೂಚಿಸಲಾಗುತ್ತದೆ ಯಾಕೆಂದರೆ ಶಾರೀರಿಕವಾಗಿ ಈ ಸಮಯದಲ್ಲಿ ಮೂತ್ರದ ಸಾರತೆಯು ಹೆಚ್ಚಾಗಿದ್ದು, ಕಲ್ಲುಗಳು ಉತ್ಪತ್ತಿಯಾಗುವ ಅಪಾಯವೂ ಈ ಅವಧಿಯಲ್ಲಿ ಹೆಚ್ಚಾಗಿರುತ್ತದೆ.

Advertisement

ಆಹಾರದ ಮೂಲ ಕ್ಯಾಲ್ಸಿಯಂ
ಮೂತ್ರಪಿಂಡದ ಕಲ್ಲುಗಳ ನಿವಾರಣೆಗಾಗಿ ಆಹಾರ ಪಥ್ಯವನ್ನು ಮಾಡುವುದೂ ಸೇರಿದಂತೆ, ಸಾಕಷ್ಟು ಕ್ಯಾಲ್ಸಿಯಂ ಅನ್ನು ಸೇವಿಸುವುದು ಬಹಳ ಆವಶ್ಯಕ. ಆಹಾರದ ಮೂಲಕ ಸಹಜ ಕ್ಯಾಲ್ಸಿಯಂ ಅಂಶವನ್ನು ಸೇವಿಸುತ್ತಿರುವ ಮಹಿಳೆಯರಿಗಿಂತಲೂ, ಕ್ಯಾಲ್ಸಿಯಂ ಪೂರಣಗಳನ್ನು ಸೇವಿಸುತ್ತಿರುವ ಮಹಿಳೆಯರಿಗೆ ಮೂತ್ರಪಿಂಡದ ಕಲ್ಲುಗಳಾಗುವ ಅಪಾಯ ಹೆಚ್ಚು ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಹಾಗಾಗಿ ಹೈಪರ್‌ ಕ್ಯಾಲ್ಸಿಯೂರಿಯಾ ತೊಂದರೆ ಇರುವ ರೋಗಿಗಳಿಗೆ ಆಹಾರದ ಮೂಲಕ ಕ್ಯಾಲ್ಸಿಯಂ ನಿರ್ಬಂಧವನ್ನು ಹಾಕುವುದು ಅಷ್ಟೊಂದು ಸೂಕ್ತವೆನಿಸುವುದಿಲ್ಲ.

ಆಕ್ಸಾಲೇಟ್‌ ಸೇವನೆ
ಆಕ್ಸಾಲೇಟ್‌ಯುಕ್ತ ಆಹಾರಗಳನ್ನು ಕಡಿಮೆ ಸೇವಿಸುವುದು, ಕ್ಯಾಲ್ಸಿಯಂಯುಕ್ತ ಆಹಾರಗಳನ್ನು ಹೆಚ್ಚು ಸೇವಿಸುವ ಮೂಲಕ ಕಲ್ಲುಗಳ ಉತ್ಪತ್ತಿಯನ್ನು ಕಡಿಮೆ ಮಾಡಬಹುದು ಎಂಬುದಾಗಿ ಇತ್ತೀಚಿನ ವರದಿಗಳು ಹೇಳುತ್ತವೆ. ಕೆಲವು ವಿಧದ ಬೀಜಗಳು, ತರಕಾರಿಗಳು ಮತ್ತು ಆಕ್ಸಾಲೇಟ್‌ ಸಮೃದ್ಧವಾಗಿರುವ ಬೇರೆ ಕೆಲವು ಆಹಾರಗಳನ್ನು ಕಡಿಮೆ ಸೇವಿಸುವಂತೆ ರೋಗಿಗಳಿಗೆ ಸಲಹೆ ನೀಡಲಾಗುತ್ತದೆ.

ಸಿಟ್ರೇಟ್‌ ಸೇವನೆ
ಮೂತ್ರದಲ್ಲಿನ ಸಿಟ್ರೇಟ್‌ ಅಂಶವು ಕ್ಯಾಲ್ಸಿಯಂ ಲವಣಾಂಶಗಳಿಂದ ಉತ್ಪತ್ತಿಯಾದ ಕಲ್ಲುಗಳ ಕರಗುವಿಕೆ ಯನ್ನು ಹೆಚ್ಚಿಸುತ್ತದೆ ಮತ್ತು ಕಲ್ಲಿನ ಹರಳುಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಕಲೈ ಸೇಷನ್‌ ಕ್ಯಾಲ್ಸಿಯಂ ವಿಸರ್ಜನೆಯನ್ನು ಮತ್ತು ಯೂರಿಕ್‌ ಆಸಿಡ್‌ ಕಲ್ಲುಗಳ ಉತ್ಪಾದನೆಯನ್ನು ತಗ್ಗಿಸುತ್ತದೆ.

Advertisement

ಸಿಟ್ರಸ್‌ ಹಣ್ಣುಗಳು ಮತ್ತು ಕೆಲವು ಹುಳಿಗಳು, ಆಹಾರ ಮೂಲದ ಕೆಲವು ನೈಸರ್ಗಿಕ ಸಿಟ್ರೇಟ್‌ಗಳಾಗಿದ್ದು, ಯೂರಿಕ್‌ ಆಸಿಡ್‌ ಮತ್ತು ಸಿಸ್ಟೈನ್‌ ಕಲ್ಲುಗಳ ನಿರ್ವಹಣೆ ಯಲ್ಲಿ ಇವನ್ನು ಬದಲಿ ಚಿಕಿತ್ಸೆಯ ರೂಪದಲ್ಲಿ ಬಳಸಬಹುದು. ಮೂತ್ರದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಇವು ನೀರಿನ ಜತೆ ಕೆಲಸ ಮಾಡಿ ಹೆಚ್ಚುವರಿ ಪರಿಣಾಮ ವನ್ನು ಉಂಟು ಮಾಡು ತ್ತವೆ. ಕಿತ್ತಲೆ ರಸ ಮತ್ತು ದ್ರಾಕ್ಷಿಯ ರಸದಲ್ಲಿನ ಸಿಟ್ರೇಟ್‌ ಅಂಶವು ಪೊಟ್ಯಾಶಿಯಂ ಜತೆ ಸಂಯೋಜಿತವಾಗಿ ರುತ್ತದೆ, ಆದರೆ ಲಿಂಬೆಯಲ್ಲಿ ಅಧಿಕ ಪ್ರಮಾ ಣದ ಸಿಟ್ರೇಟ್‌ ಅಂಶವು ಪ್ರೊಟೋನ್‌ ಜತೆ ಸಂಯೋಜಿತವಾಗಿ ರುತ್ತದೆ ಮತ್ತು ಅಲ್ಕಲೈ ಸೇಷನ್‌ ಮಟ್ಟವೂ ಹೆಚ್ಚು.

ಮಿತ ಮಿಟಾಮಿನ್‌ ಸಿ
ವಿಟಾಮಿನ್‌ ಸಿ ಯು ಆಕ್ಸಾಲೇಟ್‌ಆಗಿ ಪರಿವರ್ತನೆ ಆಗುವ ಕಾರಣಕ್ಕಾಗಿ, ವಿಟಾಮಿನ್‌ ಸಿ ಪೂರಣವನ್ನು ಮಿತವಾಗಿ ಸೇವಿಸುವಂತೆ ಶಿಫಾರಸು ಮಾಡಲಾಗುತ್ತದೆ. ಕೋಲಾದಲ್ಲಿ ಪಾಸಾ#ರಿಕ್‌ ಆಸಿಡ್‌ ಅಂಶವು ವಿಶೇಷವಾಗಿದ್ದರೆ, ಸೋಡಾದಲ್ಲಿ ಸಿಟ್ರಿಕ್‌ ಆಸಿಡ್‌ ಅಂಶವು ವಿಶೇಷವಾಗಿರುತ್ತದೆ. ಹಾಗಾಗಿ ಈ ಎರಡೂ ರೀತಿಯ ಪಾನೀಯಗಳನ್ನು ಸೇವಿಸಬಾರದು. ಹಣ್ಣು ಮತ್ತು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಈಅಖಏ ಆಹಾರಕ್ರಮವು ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಅಪಾಯವನ್ನು ತಗ್ಗಿಸುವುದನ್ನು ತೋರಿಸಿದೆ.

ಲವಣಾಂಶ ನಿರ್ಬಂಧಗಳು
ಆಹಾರದಲ್ಲಿ ಸೋಡಿಯಂ ಮತ್ತು ಪ್ರಾಣಿಜನ್ಯ ಪ್ರೊಟೀನ್‌ ಅಂಶವನ್ನು ಕಡಿಮೆ ಸೇವಿಸುವ ಮೂಲಕ ಮೂತ್ರದ ಮೂಲಕ ಕ್ಯಾಲ್ಸಿಯಂ ವಿಸರ್ಜನೆಯಾಗುವ ಪ್ರಮಾಣವನ್ನು ತಡೆಯಬಹುದು. ಪ್ರತಿ ದಿನ ಸೇವಿಸುವ ಉಪ್ಪಿನ ಪ್ರಮಾಣವು 2 ಗ್ರಾಂ ಅನ್ನು ಮೀರಬಾರದು.

ಪ್ರೊಟೀನ್‌ ನಿರ್ಬಂಧಗಳು
ಯಾವ ದೇಶದಲ್ಲಿ ಪ್ರಾಣಿಜನ್ಯ ಪ್ರೊಟೀನ್‌ ಅನ್ನು ಹೆಚ್ಚು ಸೇವಿಸುತ್ತಾರೋ ಅಲ್ಲಿ ಮೂತ್ರಪಿಂಡದ ಕಲ್ಲುಗಳ ಉತ್ಪತ್ತಿಯ ಅಪಾಯವೂ ಸಹ 4 ಪಟ್ಟು ಹೆಚ್ಚು ಎಂಬುದಾಗಿ ಅಧ್ಯಯನ ವರದಿಗಳು ಹೇಳುತ್ತವೆ. ಆಹಾರದಲ್ಲಿ ಹೆಚ್ಚು ಪ್ರೋಟೀನ್‌ ಸೇವಿಸುವುದರಿಂದ ಮೂತ್ರದಲ್ಲಿನ ಕ್ಯಾಲ್ಸಿಯಂ, ಆಕ್ಸಾಲೇಟ್‌, ಯೂರಿಕ್‌ ಆಸಿಡ್‌ ವಿಸರ್ಜ ನೆಯೂ ಹೆಚ್ಚಾಗುತ್ತದೆ ಮತ್ತು ಇದು ಕಲ್ಲುಗಳ ಉತ್ಪತ್ತಿಯ ಸಾಧ್ಯತೆಯನ್ನೂ ಸಹ ಹೆಚ್ಚಿಸುತ್ತದೆ. ಹಾಗಾಗಿ ಆಹಾರದಲ್ಲಿ ಕಡಿಮೆ ಉಪ್ಪು$, ಸಾಧಾರಣ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಡಿಮೆ ಪ್ರಮಾಣದ ಪ್ರೊಟೀನ್‌ ಅನ್ನು ಶಿಫಾರಸು ಮಾಡಲಾಗುತ್ತದೆ.

ಬೊಜ್ಜಿನ ಪಾತ್ರ
ಚಯಾಪಚಯ ಸಂಬಂಧಿತ ಕಾಯಿಲೆಗಳು, ಬೊಜ್ಜು, ಮಧುಮೇಹ ಇತ್ಯಾದಿ ಕಾಯಿಲೆಗಳು ಮೂತ್ರಪಿಂಡದ ಕಲ್ಲುಗಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂಬುದಾಗಿ ವರದಿಗಳು ಹೇಳುತ್ತವೆ. ದೇಹ ದ್ರವ್ಯ ಸೂಚ್ಯಂಕವು (ಆMಐ) ಹೆಚ್ಚಾಗಿರುವುದಕ್ಕೂ ಮೂತ್ರದ ಟಏ ಕಡಿಮೆ ಇರುವುದಕ್ಕೂ ಮತ್ತು ಯೂರಿಕ್‌ ಆಸಿಡ್‌ ಕಲ್ಲು ಉತ್ಪಾದನೆಗೂ ಸಂಬಂಧವಿದೆ. ಮೂತ್ರ ರಾಸಾಯನಿಕ ಅಧ್ಯಯನಗಳೂ ಸಹ, ಬೊಜ್ಜಿನ ಕಾರಣದಿಂದಾಗಿ ದೇಹ ದ್ರವ್ಯ ಸೂಚ್ಯಂಕ ಹೆಚ್ಚಳವಾಗು ವುದಕ್ಕೂ ಹೆಚ್ಚು ಯೂರಿನ್‌ ಆಕ್ಸಾಲೇಟ್‌ ವಿಸರ್ಜನೆಗೂ ಮತ್ತು ಆಕ್ಸಾಲೇಟ್‌ ಕಲ್ಲುಗಳ ಉತ್ಪಾದನೆ ಹೆಚ್ಚಾಗುವುದಕ್ಕೂ ಸಂಬಂಧ ಇರುವುದನ್ನು ತೋರಿಸಿವೆ.

ಸಾರಾಂಶ ಮೂತ್ರಪಿಂಡದಲ್ಲಿ ಕಲ್ಲುಗಳಾಗುವಿಕೆಯಲ್ಲಿ ಆಹಾರದ ಅಂಶಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಮತ್ತು ಆಹಾರದಲ್ಲಿ ಮಾಡಿಕೊಳ್ಳುವ ಸುಧಾರಣೆಯು ಮೂತ್ರಪಿಂಡದ ಕಲ್ಲುಗಳ ಮರುಕಳಿಸುವ ಅಪಾಯವನ್ನು ತಗ್ಗಿಸುತ್ತವೆ ಮತ್ತು ಈ ಸುಧಾರಣೆಗಳು ಖಂಡಿತವಾಗಿಯೂ ಸುರಕ್ಷಿತವಾಗಿರುತ್ತವೆ ಮತ್ತು ಬಹಳ ಕಡಿಮೆ ಖರ್ಚಿನದ್ದಾಗಿರುತ್ತವೆ. ಹೆಚ್ಚು ಹೆಚ್ಚು ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯುವ ಬಹಳ ಒಳ್ಳೆಯ ಉಪಾಯ. ಬೇಸಗೆ ಕಾಲದಲ್ಲಿ ಶರೀರದ ಬಹುಪಾಲು ನೀರು ಬೆವರಿನ ರೂಪದಲ್ಲಿ ಹೊರ ಹೋಗುವುದರಿಂದ ಹೆಚ್ಚು ನೀರು ಕುಡಿಯಬೇಕು. ಇದು ಮೂತ್ರದ ಸಾರವು ತಗ್ಗಲು ಮತ್ತು ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಗಮನಿಸಬೇಕಾದ ಕೆಲವು ಅಂಶಗಳು
1.ವಯಸ್ಸು
2.ಲಿಂಗ
3.ವೃತ್ತಿ
4.ವ್ಯಕ್ತಿಗೆ ಪೂರಕವಾದ ಅಂದರೆ ರೋಗಿಗೆ ಹೊಂದಣಿಕೆ ಆಗುವ ಆಹಾರ ಕ್ರಮವನ್ನು ಸೂಚಿಸುವುದು
5.ಆಹಾರದ ಶಿಫಾರಸಿನ ಪರಿಣಾಮವನ್ನು ವಿಶ್ಲೇಷಿ ಸಲು ಪ್ರಮಾಣಕಗಳನ್ನು ಅನುಸರಿಸುವುದು ಆವಶ್ಯಕ.

ಸುಧಾರಿಸಬಹುದಾದ ಆಹಾರದ ವಿವಿಧ ಅಂಶಗಳು
1.ದ್ರವಾಹಾರ ಸೇವನೆ
2.ಕ್ಯಾಲ್ಸಿಯಂ ಸೇವನೆ
3.ಆಕ್ಸಾಲೇಟ್‌ ಸೇವನೆ
4.ಸಿಟ್ರೇಟ್‌ ಸೇವನೆ
5.ಲವಣಾಂಶ ನಿರ್ಬಂಧಗಳು
6.ಪ್ರೋಟೀನ್‌ ನಿರ್ಬಂಧಗಳು
7.ಬೊಜ್ಜಿನ ಪಾತ್ರ

– ಅರುಣಾ ಮಲ್ಯ,
ಆಹಾರತಜ್ಞರು,
ಪಥ್ಯಾಹಾರ ವಿಭಾಗ,
ಕೆ.ಎಂ.ಸಿ . ಆಸ್ಪತ್ರೆ,
ಡಾ| ಬಿ ಆರ್‌ ಅಂಬೇಡ್ಕರ್‌ ವೃತ್ತ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next