Advertisement

ಕಿಡ್ನಿ ಸ್ಟೋನ್: ಇಲ್ಲಿದೆ ಸರಳ ಪರಿಹಾರ

01:01 PM Jun 07, 2021 | ಆದರ್ಶ ಕೊಡಚಾದ್ರಿ |

ಮನುಷ್ಯನ ಜೀವನ ಶೈಲಿಯು ಆತನ ದೇಹದ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮವನ್ನು ಉಂಟುಮಾಡುತ್ತದೆ. ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಮನುಷ್ಯ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದ್ದು, ಆತನ ಜೀವನ ವಿಧಾನದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ.

Advertisement

ನೂತನ ಆಹಾರ ಪದ್ದತಿಗಳಿಂದಾಗಿ ನಮ್ಮ ದೇಹದಲ್ಲಿ ಹಲವು ಸಮಸ್ಯೆಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಕಿಡ್ನಿ ಸ್ಟೋನ್ ಸಮಸ್ಯೆಯೂ ಕೂಡಾ ಒಂದು.

ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವೇನು?

ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆಯಾಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಂಡು ಕಿಡ್ನಿ ಸ್ಟೋನ್ ಗಳು ಉಂಟಾಗುತ್ತವೆ. ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ.

ದಿನನಿತ್ಯ  ನಾವು ನೀರನ್ನು ಸೇವನೆ ಮಾಡುವುದು ಅತ್ಯಂತ ಮುಖ್ಯವಾಗಿದ್ದು, ನೀರಿನ ಸೇವನೆಯನ್ನು ಮಾಡದೆ ಇರುವುದು ಕಿಡ್ನಿ ಸ್ಟೋನ್ ಆಥವಾ ಕಿಡ್ನಿಯಲ್ಲಿನ ಕಲ್ಲಿಗೆ ಪ್ರಮುಖ ಕಾರಣವಾಗಿದೆ. ಇದಲ್ಲದೆ ಮಸಾಲೆ ಆಹಾರ, ಕಾರ್ಬೊನೇಟೆಡ್ ಡ್ರಿಂಕ್‌ಗಳು (ತಂಪು ಪಾನೀಯಗಳಲ್ಲಿ ಕಾರ್ಬೊನೇಟೆಡ್ ದ್ರಾವಣವನ್ನು ಹೆಚ್ಚು ಬಳಸುತ್ತಾರೆ) ಕೆಫಿನ್ ಅಂಶಗಳಿರುವ ವಸ್ತುಗಳನ್ನು  ಹೆಚ್ಚೆಚ್ಚು ಸೇವಿಸುವುದು ಇದಕ್ಕೆ ಮುಖ್ಯ ಕಾರಣ.

Advertisement

ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರಗಳು

ನೀರಿನ ಸೇವನೆ

ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ದೇಹದಲ್ಲಿ  ಲವಣಾಂಶಗಳ ಶೇಖರಣೆ ಹೆಚ್ಚಾಗುತ್ತದೆ. ಹೀಗಾಗಿ ಕಿಡ್ನಿ ಸ್ಟೋನ್  ಸಮಸ್ಯೆ ಕಂಡುಬರುತ್ತದೆ. ಈ  ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಲು ದಿನನಿತ್ಯ ಕನಿಷ್ಠ ಎರಡು ಲೀಟರ್ ನೀರನ್ನು ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಲವಣಾಂಶಗಳು ಮೂತ್ರದ ರೂಪದಲ್ಲಿ ದೇಹದಿಂದ ಹೊರಹೋಗಿ  ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದಾಗಿದೆ .

ನಿಯಮಿತ ಆಹಾರ ಸೇವೆ

ನಿಯಮಿತ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡುವುದರಿಂದಾಗ ಕಿಡ್ನಿಯಲ್ಲಿ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯಬಹುದಾಗಿದೆ. ಹಾಗಾಗಿ ಆದಷ್ಟು ಪೋಷಕಾಂಶಯುಕ್ತ  ಆಹಾರವನ್ನು ಸೀಮಿತವಾಗಿ ಸೇವನೆ ಮಾಡುವುದು ಹಾಗೂ ಪ್ರತಿನಿತ್ಯ ವ್ಯಾಯಾಮ ಮಾಡುವುದು  ಉತ್ತಮ.

ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಸಮೃದ್ಧ ಆಹಾರವನ್ನು ಸೇವಿಸಿ

ನಮ್ಮ ಆಹಾರ ಕ್ರಮದಲ್ಲಿ ಸೊಪ್ಪುಗಳನ್ನು ಸೇವಿಸುವುದರಿಂದ  ಹಲವು ಸಮಸ್ಯೆಗಳಿಂದ ಪಾರಾಗಬಹುದಾಗಿದ್ದು,  ಪಾಲಕ್ ಸೊಪ್ಪು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಬಹುದು. ಆಹಾರವು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅನ್ನು ಹೊಂದಿದ್ದರೆ ಅವು ಕರುಳಿನಲ್ಲಿ ಒಟ್ಟಿಗೆ ಬೆರೆತು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತವೆ.

ಸೋಡಿಯಂ ಸೇವನೆ ಕಡಿಮೆ ಮಾಡಿ

ಹೆಚ್ಚಿನ ಉಪ್ಪು ಬೆರೆಸಿರುವ  ಆಹಾರವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಮೂತ್ರದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಅನ್ನು ಮೂತ್ರದಿಂದ ರಕ್ತಕ್ಕೆ ಮರುಹೀರಿಕೊಳ್ಳದಂತೆ ತಡೆಯುತ್ತದೆ. ಇದು ಮೂತ್ರದ ಕ್ಯಾಲ್ಸಿಯಂಗೆ ಕಾರಣವಾಗುತ್ತದೆ. ಈಗಾಗಿ  ಅತಿಯಾದ ಉಪ್ಪಿನ ಬಳಕೆ ಮಾಡುವುದರಿಂದ ಅದು ಕಿಡ್ನಿ ಸ್ಟೋನ್ ಗೆ ಕಾರಣವಾಗಬಹುದು. ಸಂಸ್ಕರಿಸಿದ ಆಹಾರ ಸೇವನೆಯನ್ನು ಕಡಿಮೆ ಮಾಡಿ, ಹೆಚ್ಚಾಗಿ ತರಕಾರಿಗಳನ್ನು ಸೇವಿಸುವುದು ಉತ್ತಮವಾದದ್ದು.

ಮಾಂಸ ಸೇವನೆಯನ್ನು ಕಡಿಮೆ ಮಾಡಿ  
ಮಾಂಸವು ಆಮ್ಲೀಯವಾಗಿರುತ್ತದೆ ಮತ್ತು ಯೂರಿಕ್ ಆ್ಯಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ಯೂರಿಕ್ ಆ್ಯಸಿಡ್ ಕ್ಯಾಲ್ಸಿಯಂ ಆಕ್ಸಲೇಟ್ನೊಂದಿಗೆ ಸೇರಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಹಾಗಾಗಿ ಅತಿಯಾದ ಮಾಂಸ ಮತ್ತು ಹಾಲಿನ ಸೇವನೆಯನ್ನು ಮಿತಿಗೊಳಿಸಿ. ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.

ಕಾಫಿ, ತಂಪು ಪಾನೀಯ ಸೇವನೆ ಮಿತಗೊಳಿಸಿ

ದಿನನಿತ್ಯದ ಆಹಾರ ಕ್ರಮದಲ್ಲಿ ಪದೇ ಪದೇ ಕಾಫಿ ಸೇವನೆ ಮಾಡುವುದರಿಂದ ನಮ್ಮ  ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ಇದು ನಮ್ಮ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಪರಿಣಾಮವಾಗಿ ಕಿಡ್ನಿಗಳಲ್ಲಿ  ಕಲ್ಲುಗಳು ರೂಪುಗೊಳ್ಳಲು ಕಾರಣವಾಗುತ್ತದೆ ತಂಪು ಪಾನೀಯಗಳು ಹೆಚ್ಚು ಸಿಹಿಯಾಗಿರುತ್ತವೆ. ಹಾಗಾಗಿ ತಂಪು ಪಾನೀಯಗಳನ್ನು  ಸೇವನೆ ಮಾಡುವುದರಿಂದಾಗಿ ಅದು ಸಹ  ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next