ಬೆಂಗಳೂರು: ಲಕ್ಷಾಂತರ ರೂ. ಸಾಲ ಪಡೆದು ವಾಪಸ್ ನೀಡದೆ ವಂಚಿಸಿ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಶಿವಕೃಷ್ಣನ್ (34) ಮತ್ತು ಜಾಯ್ ಸ್ಟಿವನ್(34) ಬಂಧಿತ ಆರೋಪಿಗಳು. ಇತರೆ ಆರೇಳು ಮಂದಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಆರೋಪಿಗಳು ತೆಲಂಗಾಣ ಮೂಲದ ರಾಜು ಅಲಿಯಾಸ್ ಅಜ್ಮೀರಾ ರಾಜು(29) ಎಂಬಾತನನ್ನು ಜೂನ್ 16ರಂದು ಎಂ.ಜಿ.ರಸ್ತೆಯ ಹೋಟೆಲ್‌ವೊಂದರ ಸಮೀಪದಿಂದ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೊಳಗಾಗಿದ್ದ ರಾಜು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವ ಕೆಲಸ ಮಾಡಿಕೊಂಡಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ. ಈ ಮಧ್ಯೆ ಕ್ರಿಕೆಟರ್ಸ್, ಸಿನಿಮಾ ನಟರು ಹಾಗೂ ಗಣ್ಯರ ಜತೆ ಪೋಟೋ ತೆಗೆಸಿಕೊಳ್ಳುವ ಹವ್ಯಾಸ ಹೊಂದಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಕೆಲ ಸರ್ಕಾರಿ ನೌಕರಿ ಹಾಗೂ ಕೆಲವೆಡೆ ಉದ್ಯೋಗ ಅವಕಾಶಗಳನ್ನು ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾನೆ. ಆರೋಪಿಗಳ ಪೈಕಿ ಕೆಲವರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಇತರೆ ಆಮಿಷವೊಡ್ಡಿ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ. ಆದರೆ, ವಾಪಸ್ ನೀಡಿರಲಿಲ್ಲ. ಅಲ್ಲದೆ, ತೆಲಂಗಾಣ ತೊರೆದು ಆರೇಳು ತಿಂಗಳಿಂದ ಬೆಂಗಳೂರಿನ ಹೋಟೆಲ್‌ಗಳಲ್ಲಿ ವಾಸವಾಗಿದ್ದ. ಕೆಲ ದಿನಗಳಿಂದ ಎಂ.ಜಿ.ರಸ್ತೆಯ ಹೋಟೆಲ್‌ವೊಂದರಲ್ಲಿ ವಾಸವಾಗಿದ್ದ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ರಾಜು, ತನ್ನ ಐಷಾರಾಮಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ. ಅದನ್ನು ಗಮನಿಸಿದ ಆರೋಪಿಗಳು ರಾಜುನ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ಫಾರ್ಮ್ಹೌಸ್‌ನಲ್ಲಿ ಹಿಂಸೆ: ಜೂನ್ 16ರಂದು ಎರಡು ಕಾರಿನಲ್ಲಿ ಬಂದಿದ್ದ 8-10 ಮಂದಿ ಆರೋಪಿಗಳು ಹಲ್ಲೆ ನಡೆಸಿ ರಾಜುನನ್ನು ಅಪಹರಣ ಮಾಡಿ ತೆಲಂಗಾಣಕ್ಕೆ ಕರೆದೊಯ್ದಿದ್ದರು. ಅಲ್ಲಿನ ಫಾರ್ಮ್ಹೌಸ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಕೋಟ್ಯಂತರ ರೂ.ಗೆ ಬೇಡಿಕೆ ಇಟ್ಟಿದ್ದರು. ಇತ್ತ ರಾಜು ಸ್ನೇಹಿತ ಹಲಸೂರು ಠಾಣೆಗೆ ದೂರು ನೀಡಿದ್ದ. ಅದನ್ನು ಆಧರಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ರಾಜುನನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.