ಬೆಂಗಳೂರು: ಪ್ರೀತಿಸಿದ ಯುವಕನ ಜತೆ ವಿವಾಹವಾಗುವ ಸಲುವಾಗಿ ಯುವತಿಯೊಬ್ಬಳು ತನ್ನ ಸಹೋದರನ ಜತೆ ಸೇರಿ ಅಪಹರಣದ ಕಥೆ ಕಟ್ಟಿದ ಪ್ರಕರಣ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಯ ಸಹೋದರ ನೀಡಿದ ದೂರಿನ ಮೇರೆಗೆ ಹುಡುಕಾಟ ನಡೆಸಿದ ಪೊಲೀಸರ ಕೈಗೆ ಯುವತಿ ಸಿಕ್ಕಾಗ ಅಪಹರಣ ನಾಟಕ ಆಡಿರುವುದು ಬಯಲಾಗಿದೆ. ಶಾಂತಿನಗರದ ಅಕ್ಕಿತಮ್ಮನಹಳ್ಳಿಯ ನಿವಾಸಿ ಪಾರ್ವತಿ (21) ನಾಟಕದ ಸೂತ್ರಧಾರಿ. ಈಕೆಯ ತಮ್ಮ ಅಮೃತ್ ಅಪಹರಣದ ಪಾತ್ರಧಾರಿ. ಪ್ರೀತಿಯ ವಿಚಾರ ಮನೆಯವರಿಗೆ ತಿಳಿಸಿದರೆ ವಿರೋಧಿಸುತ್ತಾರೆ ಎಂಬ ಭಯದಲ್ಲಿ ಈ ರೀತಿ ಮಾಡಿರುವುದಾಗಿ ಯುವತಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಏನು?: ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದು, ಮನೆ ಸಮೀಪದ ನಿವಾಸಿ ಶಂಭು ಎಂಬಾತನನ್ನು ಪ್ರೀತಿಸುತ್ತಿದ್ದಳು. ಇದೇ ವೇಳೆ ಯುವತಿಯ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಇದರಿಂದ ಆತಂಕಗೊಂಡ ಯುವತಿ, ಕಿರಿಯ ಸಹೋದರ ಅಮೃತ್‌ಗೆ ತನ್ನ ಹಾಗೂ ಶಂಭುವಿನ ಪ್ರೀತಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಅಮೃತ್, ಅಕ್ಕನ ಜತೆ ಸೇರಿ ಅಪಹರಣದ ಸಂಚು ರೂಪಿಸಿದ್ದಾನೆ.
ಅದರಂತೆ ಮಾ.31ರಂದು ಮಧ್ಯಾಹ್ನ 3 ಗಂಟೆಗೆ ಪಾರ್ವತಿ ಹತ್ತಿರದ ಬೇಕರಿಗೆ ಹೋಗುತ್ತಾರೆ. ಅದೇ ವೇಳೆ ಬೇಕರಿ ಬಳಿ ಕಾರಿನಲ್ಲಿ ಬಂದ ಇಬ್ಬರು ಯುವಕರ ಜತೆ ಆಕೆ ಹೋಗುತ್ತಾರೆ. ಕೆಲ ಹೊತ್ತಿನ ಬಳಿಕ ಅಮೃತ್ ಅಶೋಕ್‌ನಗರ ಠಾಣೆಗೆ ಹೋಗಿ ನನ್ನ ಅಕ್ಕನ್ನು ಅಪರಿಚಿತ ವ್ಯಕ್ತಿಗಳು ಕೆಎ 01, ಎಂಇ 7279 ನಂಬರಿನ ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ದೂರು ನೀಡಿದ. “ನಾನು ಮತ್ತು ಅಕ್ಕ ಮಧ್ಯಾಹ್ನ ಬೇಕರಿಗೆ ಹೋಗಿ ಪಪ್ಸ್ ತಿಂದು, ಕೂಲ… ಡ್ರಿಂಕ್ಸ್ ಕುಡಿದು ಮನೆಗೆ ಹೋಗುವಾಗ ಇಬ್ಬರು ಕಾರಿನಲ್ಲಿ ಬಂದು, ಆಕೆಯನ್ನು ಅಪಹರಿಸಿದರು ಎಂದು ಮಾಹಿತಿ ನೀಡಿ, ಸ್ಥಳವನ್ನು ತೋರಿಸುತ್ತಾನೆ.
10 ಗಂಟೆ ಕಾರ್ಯಾಚರಣೆ
ಯುವತಿ ಪತ್ತೆಗಾಗಿ ಅಶೋಕನಗರ ಠಾಣೆ ಪೊಲೀಸರು ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿದರು. ನಂತರ, ಕೆಂಗೇರಿ ಬಳಿಯ ದೇವಸ್ಥಾನವೊಂದರ ಬಳಿ ಕಾರು ನಿಂತಿರುವುದಾಗಿ ಮಾಹಿತಿ ರವಾನೆಯಾಗುತ್ತದೆ. ಕಾರಿನ ಸುಳಿವು ಪಡೆದ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಅಷ್ಟರಲ್ಲಿ ಯುವತಿ ಪ್ರಿಯತಮ ಶಂಭು ಜತೆ ಇಲ್ಲಿನ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರ ಪೋಷಕರನ್ನು ಠಾಣೆಗೆ ಕರೆಸಿ ಸಂಧಾನ ನಡೆಸಿ, ಶಂಭು ಹಾಗೂ ಯುವತಿಗೆ ಬುದ್ಧಿ ಹೇಳಿ ಕಳುಹಿಸಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.