ಬೆಂಗಳೂರು: ಪತಿ ಜತೆ ಸೇರಿಕೊಂಡು ಪ್ರಿಯಕರನನ್ನು ಅಪಹರಿಸಿ ಹಲ್ಲೆ ನಡೆಸಿದಲ್ಲದೆ, ಕೊಲೆಗೆ ಯತ್ನಿಸಿದ ಪ್ರಿಯತಮೆ ಸೇರಿ 8 ಮಂದಿ ಹನುಮಂತನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹನುಮಂತನಗರ ನಿವಾಸಿ ಕ್ಲಾರಾ, ಆಕೆಯ ಪತಿ ಮಧು, ಕ್ಲಾರಾ ಸ್ನೇಹಿತೆ ಹೇಮಾವತಿ, ಆಕೆಯ ಪತಿ ಸಂತೋಷ್ ಗೌಡ, ಸಹಚರರಾದ ಕಿರಣ್, ಅಶ್ವತ್ಥ್ ನಾರಾಯಣ್, ಮನು ಮತ್ತು ಲೋಕೇಶ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಆ.16ರಂದು ರಾತ್ರಿ ಮಹದೇವಪ್ರಸಾದ್ ಎಂಬಾತ ನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆಗೈಯಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿದರು.
ಮಹದೇವಪ್ರಸಾದ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೂಂದೆಡೆ ಕ್ಲಾರಾ ಮತ್ತು ಪತಿ ಮಧು ಜತೆ ಕೌಟುಂಬಿಕ ವಿಚಾರವಾಗಿ ದೂರವಾಗಿದ್ದರು. ಈ ಮಧ್ಯೆ ಕ್ಲಾರಾ ಮೊಬೈಲ್ ಖರೀದಿಗೆ ಬಂದಾಗ ಮಹದೇವಪ್ರಸಾದ್ ಪರಿಚಯವಾಗಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಅಲ್ಲದೆ, ಒಂದೇ ಮನೆಯಲ್ಲಿ ಆರೇಳು ತಿಂಗಳು ವಾಸವಾಗಿದ್ದರು. ಈ ನಡುವೆ ಪತಿ ಮಧು ಜತೆ ಚರ್ಚಿಸಿ ಹೊಂದಾಣಿಕೆ ಮಾಡಿಕೊಂಡು ಮರು ಜೀವನ ಆರಂಭಿಸಿದ್ದಳು. ಆದರೆ, ಮಹದೇವಪ್ರಸಾದ್, ಕ್ಲಾರಾಗೆ ತನ್ನೊಂದಿಗೆ ಜೀವನ ನಡೆಸುವಂತೆ ದುಂಬಾಲು ಬಿದ್ದಿದ್ದ. ಈ ವಿಚಾರವನ್ನು ಸ್ನೇಹಿತೆ ಹೇಮಾವತಿ ಬಳಿ ಕ್ಲಾರಾ ಹೇಳಿಕೊಂಡಿದ್ದರು. ಬಳಿಕ ಮಧು, ಹೇಮಾಮತಿ ಹಾಗೂ ಈಕೆಯ ಗಂಡ ಸಂತೋಷ್‌ಗೌಡ ಸಂಚು ರೂಪಿಸಿ, ಇತರೆ ಸಹಚರರ ಜತೆ ಸೇರಿ ಆ.16ರಂದು ತಡರಾತ್ರಿ ಅಪಹರಿಸಿದ್ದರು.
ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದಲ್ಲದೆ, ಕೊಲೆಗೆ ಯತ್ನಿಸಿದ್ದರು. ಮತ್ತೂಮ್ಮೆ ಕ್ಲಾರಾ ವಿಚಾರಕ್ಕೆ ಬಾರದಂತೆ ಎಚ್ಚರಿಕೆ ನೀಡಿ ಮನೆ ಬಳಿ ಬಿಟ್ಟು ಹೋಗಿದ್ದರು. ಈ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆ.26ರಂದು ಮಹದೇವಪ್ರಸಾದ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.