ಬೆಂಗಳೂರು: ಚಿನ್ನದ ಸರ ವಾಪಸ್ ಕೊಡದಕ್ಕೆ ಪರಿಚಯಸ್ಥನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ರೌಡಿಶೀಟರ್‌ಗಳನ್ನು ಮಾದನಾಯಕ ನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸುಲ್ತಾನ್‌ಪಾಳ್ಯದ ಸೈಯದ್ ವಸೀಂ ಅಲಿಯಾಸ್ ಕುಂಡಾಲ (31) ಮತ್ತು ಎಚ್‌ಬಿಆರ್ ಲೇಔಟ್‌ನ ಮೀಂಟೋ ಶರ್ಮಾ(37) ಮತ್ತು ಸಂಪಿಗೆಹಳ್ಳಿ ನಿವಾಸಿ ಇದಾಯತ್ ಖಾನ್(35) ಬಂಧಿತರು. ಆರೋಪಿಗಳು ಸೆ.28 ರಂದು ರಾಜಸ್ಥಾನ ಮೂಲದ ಮಾಂಗಿ ಲಾಲ್(25) ಮತ್ತು ಸುರೇಂದರ್(17) ಎಂಬುವರನ್ನು ಅಪಹರಿಸಿದ್ದರು.
ಅಪಹರಣಕ್ಕೊಳಗಾದ ಮಾಂಗಿ ಲಾಲ್ ಈ ಹಿಂದೆ ಆರ್.ಟಿ. ನಗರದಲ್ಲಿದ್ದಾಗ ರೌಡಿಶೀಟರ್ ಸಾತ್ವಿಕ್‌ನಿಂದ ಚಿನ್ನದ ಸರ ಪಡೆದುಕೊಂಡಿದ್ದ. ಹಿಂದಿರುಗಿಸುವಂತೆ ಹಲವು ಬಾರಿ ಹೇಳಿದರೂ ವಾಪಸ್ ನೀಡಿರಲಿಲ್ಲ. ಈ ಮಧ್ಯೆ ಮಾಂಗಿಲಾಲ್ ಆರ್.ಟಿ.ನಗರದಿಂದ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ನಗರೂರು ಕಾಲೋನಿ ಸ್ಥಳಾಂತರವಾಗಿದ್ದು, ಐದಾರು ಮಂದಿ ಸ್ನೇಹಿತರ ಜತೆ ವಾಸವಾಗಿದ್ದ. ಈ ವಿಚಾರ ತಿಳಿದ ಸಾತ್ವಿಕ್ ತನ್ನ ರೌಡಿ ಸ್ನೇಹಿತರ ಜತೆ ಸೆ.28ರಂದು ರಾತ್ರಿ ಮಾಂಗಿಲಾಲ್ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಮಾಂಗಿಲಾಲ್ ಮತ್ತು ಸುರೇಂದರ್‌ನನ್ನು ಅಪಹರಿಸಿ, ಬಳಿಕ ಮಾಂಗಿಲಾಲ್ ಸ್ನೇಹಿತ ಶಿವಕುಮಾರ್‌ಗೆ ಫೋನ್ ಮಾಡಿ 6.50 ಲಕ್ಷ ರೂ. ಕೊಟ್ಟರೆ ಬಿಡುಗಡೆ ಮಾಡುವುದಾಗಿ ಎಂದು ಬೇಡಿಕೆ ಇಟ್ಟಿದ್ದರು.
ಕೂಡಲೇ ಮಾಂಗಿಲಾಲ್ ಸ್ನೇಹಿತ ಶಿವಶಂಕರ್ ಠಾಣೆಗೆ ಬಂದು ದೂರು ನೀಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಠಾಣಾಧಿಕಾರಿ ಎಂ.ಕೆ.ಮುರಳೀಧರ್ ನೇತೃತ್ವದ ತಂಡ ಸೆ.30ರಂದು ಕೋಲಾರ-ತಿರುಪತಿ ರಸ್ತೆಯ ಮೂಡಿಗೆರೆ ಸಮೀಪದ ಹೋಟೆಲ್ ಬಳಿ ಮಾಂಗಿಲಾಲ್ ಮತ್ತು ಸುರೇಂದರ್‌ನನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದರು
ಆರೋಪಿಗಳ ವಿಚಾರಣೆ ವೇಳೆ ಮಾಂಗಿಲಾಲ್, ಸಾತ್ವಿಕ್ ಎಂಬಾತನಿಂದ ಚಿನ್ನದ ಸರ ಪಡೆದುಕೊಂಡು ವಾಪಸ್ ನೀಡಿರಲಿಲ್ಲ. ಹೀಗಾಗಿ ಅಪಹರಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಹೇಳಿದ್ದಾರೆ. ಬಂಧಿತ ಮೂವರು ರೌಡಿಶೀಟರ್‌ಗಳ ವಿರುದ್ಧ ನಗರದ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಬೆಂ.ಗ್ರಾ.ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.