ಸಿಡ್ನಿ: ಭರ್ಜರಿ ಹೋರಾಟ ಪ್ರದರ್ಶಿಸಿದ ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ 21-10, 21-14 ರಿಂದ ನೇರ ಸೆಟ್‌ನಲ್ಲಿಯೇ ಚೀನಾದ ಷಿ ಯುಕಿ ವಿರುದ್ಧ ಜಯ ಸಾಧಿಸಿದರು. ಇಬ್ಬರ ನಡುವಿನ ಹೋರಾಟ 40 ನಿಮಿಷಗಳ ಕಾಲ ನಡೆಯಿತು.
ಮೊದಲನೇ ಸೆಟ್‌ನ ಆರಂಭದಲ್ಲಿ 11ನೇ ಶ್ರೇಯಾಂಕಿತ ಶ್ರೀಕಾಂತ್ ಮತ್ತು 4ನೇ ಶ್ರೇಯಾಂಕಿತ ಚೀನಾ ಆಟಗಾರನ ನಡುವೆ ಭಾರೀ ಹೋರಾಟವಿತ್ತು. ಒಂದು ಹಂತದಲ್ಲಿ ಪಂದ್ಯ 5-5 ರಿಂದ ಸಮಬಲದಲ್ಲಿತ್ತು. ಆದರೆ ಈ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಶ್ರೀಕಾಂತ್ ಒಂದರ ನಂತರ ಒಂದರಂತೆ ನಿರಂತರವಾಗಿ ಅಂಕವನ್ನು ಕಲೆಹಾಕುತ್ತಾ ಸಾಗಿದರು. ಈ ಹಂತದಲ್ಲಿ ಭಾರತೀಯ ಆಟಗಾರನ ಹೊಡೆತಕ್ಕೆ ಚೀನಾ ಆಟಗಾರ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶ್ರೀಕಾಂತ್ 1ನೇ ಗೇಮ್ ಅನ್ನು 21-10 ರಿಂದ ವಶಪಡಿಸಿಕೊಂಡರು. ಈ ಗೇಮ್ ಕೇವಲ 15 ನಿಮಿಷದಲ್ಲಿಯೇ ಅಂತ್ಯವಾಯಿತು.
ಎರಡನೇ ಗೇಮ್‌ನ ಆರಂಭದಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟವಿತ್ತು. ಒಂದು ಹಂತದಲ್ಲಿ 6-6 ಅಂಕದಿಂದ ಸಮಬಲದಲ್ಲಿತ್ತು. ನಂತರ ನಿಧಾನಕ್ಕೆ ಶ್ರೀಕಾಂತ್ ಅಂಕವನ್ನು ಹೆಚ್ಚಿಸಿಕೊಳ್ಳುತ್ತಾ 11-8 ರಿಂದ ಮುನ್ನಡೆ ಪಡೆದರು. ಅಂತಿಮವಾಗಿ ಭಾರತೀಯ ಆಟಗಾರ ಶ್ರೀಕಾಂತ್ 21-14 ರಿಂದ ವಶಪಡಿಸಿಕೊಂಡು ಫೈನಲ್‌ಗೆ ಲಗ್ಗೆ ಹಾಕಿದರು.
ಸತತ 3ನೇ ಸೂಪರ್ ಸೀರೀಸ್ ಫೈನಲ್:
ಶ್ರೀಕಾಂತ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಚೀನಾದ ಶಿ ಯುಕಿಯನ್ನು ಸೋಲಿಸಿ ಫೈನಲ್ ಪ್ರವೇಶಿಸುವ ಮೂಲಕ ಸತತ ಮೂರು ಸೂಪರ್ ಸೀರೀಸ್ ಕೂಟದಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ನಡೆದ ಸಿಂಗಾಪುರ್ ಓಪನ್‌ನಲ್ಲಿ ಫೈನಲ್ ತಲುಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದರು. ಕಳೆದವಾರ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಫೈನಲ್ ತಲುಪಿ ಪ್ರಶಸ್ತಿ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತೀಯ ಪುರುಷರಲ್ಲಿ ಮೊದಲನೇ ವ್ಯಕ್ತಿಯಾಗಿದ್ದಾರೆ. ಉಳಿದಂತೆ ವಿಶ್ವಮಟ್ಟದಲ್ಲಿ ಇಂಡೋನೇಷ್ಯಾದ ಸೋನಿ ಡ್ವಿ ಕುನ್‌ಕೊರೊ, ಮಲೇಷ್ಯಾದ ಲೀ ಚಾಂಗ್ ವೈ, ಚೀನಾದ ಲಿನ್ ಡಾನ್ ಮತ್ತು ಚೆನ್ ಲಾಂಗ್ ಈ ಸಾಧನೆ ಮಾಡಿದ್ದಾರೆ.