Advertisement

ತಾಯಿಯನ್ನು ಒದ್ದು ಹೋಗುವುದು ಸರಿಯಲ್ಲ: K.S.ಈಶ್ವರಪ್ಪ

11:19 PM Apr 16, 2023 | Team Udayavani |

ಶಿವಮೊಗ್ಗ: ನಾನು ದೊಡ್ಡವರ ಬಗ್ಗೆ ಮಾತನಾಡಲು ಹಾಗೂ ಯಾರ ಬಗ್ಗೆಯೂ ಟೀಕಿಸಲು ಬಯಸುವುದಿಲ್ಲ. ಆದರೆ ಒಂದು ಮಾತ್ರ ಸತ್ಯ. ಬಿಜೆಪಿ ನಮ್ಮ ತಾಯಿ ಇದ್ದಂತೆ. ತಾಯಿಯನ್ನು ಒದ್ದು ಹೋಗುವುದು ಸರಿಯಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ತಳಹದಿ ಮೇಲೆ ಭಾರತಾಂಬೆಯ ಬಗ್ಗೆ ಶ್ರೇಷ್ಠ ಮಟ್ಟದ ಕಲ್ಪನೆ ಇರುವ ಪಕ್ಷ ಬಿಜೆಪಿ. ಇಲ್ಲಿ ರಾಷ್ಟ್ರಮಟ್ಟದ ನಾಯಕರು ಕೂಡ ಸಾಮಾನ್ಯ ಕಾರ್ಯಕರ್ತರೇ. ಭಾರತಾಂಬೆ, ಬಿಜೆಪಿ ನಮ್ಮ ತಾಯಿ ಎಂಬ ಭಾವನೆಯಲ್ಲಿ ಪಕ್ಷ ಸಂಘಟನೆಯಾಗಿದೆ. ದೇಶ ಹಾಗೂ ಧರ್ಮವನ್ನು ಉಳಿಸುವುದೇ ಇದರ ಸಿದ್ಧಾಂತ. ಅವಕಾಶ ಸಿಗುವವರು ಚುನಾಯಿತ ಪ್ರತಿನಿಧಿ ಯಾಗುತ್ತಾರೆ. ಚುನಾಯಿತ ಪ್ರತಿನಿ ಧಿಯೇ ವಿಶೇಷ ಅಲ್ಲ. ಸಾಮಾನ್ಯ ಕಾರ್ಯಕರ್ತ ಯಾವುದೇ ಸ್ಥಾನಕ್ಕೆ ಹೋಗಬಹುದು ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ ಎಂದರು.

ಜಗದೀಶ ಶೆಟ್ಟರ್‌, ಸವದಿ ಸಹಿತ ಬಿಜೆಪಿ ಬಿಡುವವರನ್ನು ನಾನು ಟೀಕಿಸುವುದಿಲ್ಲ. ಹೋಗುವವರ ಮನವೊಲಿಸಿ, ತಾತ್ಕಾಲಿಕ ನೋವನ್ನು ಪರಿಹರಿಸಬೇಕು. ಆದರೆ ತಾಯಿಯನ್ನು ಒದ್ದು ಹೋಗುವುದು ಮಾತ್ರ ಸರಿಯಲ್ಲ ಎಂದರು.

ಪಕ್ಷ ಬಿಟ್ಟು ಹೋದರೆ ಹೋಗಲಿ ಎಂದು ಹೇಳುವುದಿಲ್ಲ. ಆದರೆ ಹೋಗುವ ಮೊದಲು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ತಾನು ಶಾಸಕ, ಮಂತ್ರಿ, ಮುಖ್ಯಮಂತ್ರಿ ಮುಂತಾದ ಸ್ಥಾನಕ್ಕೆಲ್ಲ ಹೇಗೆ ತಲುಪಿದೆ ಎಂಬುದನ್ನು ತಿಳಿದುಕೊಳ್ಳಲಿ. ಕಾರ್ಯಕರ್ತರ ಬೆವರಿನ ಫಲವೇ ಈ ಸ್ಥಾನಮಾನಗಳು ಹೊರತು ಸ್ವಂತ ಶಕ್ತಿಯಿಂದ ಗಳಿಸಿದ್ದಲ್ಲ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದರು.

ಕೊಲೆ ಬೆದರಿಕೆಗೆ ಜಗ್ಗಲಾರೆ
ಪಿಎಫ್‌ಐನ ಶಾಹೀರ್‌ ಶೇಖ್‌ ಎಂಬಾತ ನಿತಿನ್‌ ಗಡ್ಕರಿಗೆ ಬೆದರಿಕೆ ಹಾಕಿದ್ದ. ಆತನನ್ನು ಬಂಧಿ ಸಿ, ವಿಚಾರಣೆ ಮಾಡಿದಾಗ ಆತ ಭಯೋತ್ಪಾದನ ಚಟುವಟಿಕೆಯಲ್ಲಿ ಇರುವುದು ಗೊತ್ತಾಗಿದೆ. ಹಿಂದೂ ಧರ್ಮದ ಪರ ಇರುವವರ ಕೊಲೆಗೆ ಸಂಚು ರೂಪಿಸಿದ್ದು ಗೊತ್ತಾಗಿದೆ. ಸಿಎಂ ಕೂಡ ಈ ಬಗ್ಗೆ ಗಮನ ಹರಿಸಿದ್ದು, ಕ್ರಮಕ್ಕೆ ಸೂಚಿಸಿದ್ದಾರೆ. ನನ್ನ ಮನೆ ಹಾಗೂ ನನಗೆ ಭದ್ರತೆ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ನಾನು ಈ ರೀತಿಯ ಬೆದರಿಕೆಗೆ ಜಗ್ಗುವುದಿಲ್ಲ. ತಾಯಿ ಸೇವೆಯಂಥ ಬಿಜೆಪಿ ಕೆಲಸವನ್ನು ಯಾವುದೇ ಭಯವಿಲ್ಲದೆ ಮಾಡುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next